ಕೋಟ ಪರಿಸರದಲ್ಲಿ 10 ಮಂದಿಗೆ ಕೊರೋನ: ಹೊಟೇಲ್, ದಿನಸಿ ಅಂಗಡಿ, ಮನೆಗಳು ಸೀಲ್‌ಡೌನ್

Update: 2020-07-05 15:22 GMT

ಕೋಟ, ಜು.5: ಕೋಟದ ಹೋಟೆಲಿನ ಸಿಬಂದಿ ಹಾಗೂ ಅಲ್ಲೇ ಸಮೀಪದ ದಿನಸಿ ಅಂಗಡಿಯ ಮಾಲಕರ ಕುಟುಂಬದವರು ಸೇರಿ ಒಟ್ಟು 9 ಮಂದಿಗೆ ಕೊರೋನ ಸೋಂಕಿರುವುದು ರವಿವಾರ ದೃಢಪಟ್ಟಿದೆ.

ಜು.1ರಂದು ಕೋಟದ ಹೊಟೇಲಿನ ಮಾಲಕರಿಗೆ ಕೊರೋನ ಸೋಂಕು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಹೊಟೇಲ್ ಹಾಗೂ ಅವರ ಮನೆಯನ್ನು ಸೀಲ್ ಡೌನ್ ಮಾಡಿ, ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಈ ಹೊಟೇಲಿನ ಸಿಬಂದಿ ಹಾಗೂ ಇವರ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ಕ್ವಾರಂಟೈನ್‌ನಲ್ಲಿರಿಸಿ ಕೊರೋನ ಪರೀಕ್ಷೆಗೆ ಮಾಡಲಾಗಿತ್ತು. ಇದೀಗ ಹೋಟೆಲ್ ಮಾಲಕನ ಸಂಪರ್ಕದಲ್ಲಿದ್ದ ಹೊಟೇಲಿನ ಐವರು ಸಿಬಂದಿಗಳಿಗೆ ಮತ್ತು ಹೋಟೆಲ್ ಸಮೀಪದಲ್ಲಿಯೇ ಇರುವ ದಿನಸಿ ಅಂಗಡಿಯ ಮಾಲಕನ ಕುಟುಂಬದ ನಾಲ್ಕು ಮಂದಿಗೆ ಕೊರೋನ ಪಾಸಿಟಿವ್ ಬಂದಿದೆ. ಅಂಗಡಿ ಮಾಲಕರ ವರದಿ ನೆಗಿಟಿವ್ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ದಿನಸಿ ಅಂಗಡಿ ಮತ್ತು ಅದಕ್ಕೆ ತಾಗಿಕೊಂಡೇ ಇರುವ ಅವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಹೊಟೇಲಿನ ಇಬ್ಬರು ಸಿಬ್ಬಂದಿಗಳ ಗಿಳಿಯಾರಿನಲ್ಲಿರುವ ಮನೆಯನ್ನು ಕೂಡ ಸೀಲ್‌ಡೌನ್ ಮಾಡಲಾಗಿದೆ. ಉಳಿದ ಮೂವರು ಸಿಬ್ಬಂದಿಗಳು ಅಲ್ಲೇ ಹೊಟೇಲಿನಲ್ಲಿರುವ ರೂಮಿನಲ್ಲಿ ಉಳಿದುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

ಕೋಟ ಕಂದಾಯ ಅಧಿಕಾರಿ ರಾಜು, ಗ್ರಾಮ ಕರಣಿಕ ಚೆಲುವರಾಜ್, ಕೋಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಸ್ಥಳಕ್ಕೆ ಭೇಟಿ ನೀಡಿದರು. ಕೋಟದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.

ಸಾಲಿಗ್ರಾಮದಲ್ಲೂ ಪಾಸಿಟಿವ್: ಸಾಲಿಗ್ರಾಮದ ಮೆಡಿಕಲ್ ರೆಪ್ ಆಗಿ ಕೆಲಸ ನಿರ್ವಹಿಸುತ್ತಿರುವ ಒಬ್ಬರಿಗೆ ಕೊರೋನ ಸೋಂಕಿರುವುದು ರವಿವಾರ ದೃಢಪಟ್ಟಿದೆ. ತನ್ನ ಕೆಲಸ ನಿಮಿತ್ತ ವೈದ್ಯರೊಬ್ಬರನ್ನು ಸಂಪರ್ಕ ಮಾಡಿರುವುದರಿಂದ ಇವರಿಗೆ ಸೋಂಕು ತಗಲಿರಬಹುದು ಎಂದು ಶಂಕಿಸಲಾಗಿದೆ. ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಇವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News