ದ.ಕ.ದಲ್ಲಿ ಒಂದೇದಿನ 147 ಮಂದಿಗೆ ಕೊರೋನ ಪಾಸಿಟಿವ್: 80 ವರ್ಷದ ವೃದ್ಧೆ ಸಹಿತ 38 ಮಂದಿ ಡಿಸ್ಚಾರ್ಜ್

Update: 2020-07-05 16:52 GMT

ಮಂಗಳೂರು, ಜು.5: ಸಂಡೇ ಲಾಕ್‌ಡೌನ್ ದಿನವೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಸ್ಫೋಟವಾಗಿದ್ದು, ಇದೇ ಮೊದಲ ಬಾರಿಗೆ ಬರೋಬ್ಬರಿ 147 ಪಾಸಿಟಿವ್ ಕೇಸ್‌ಗಳು ರವಿವಾರ ದೃಢಪಟ್ಟಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 1242ಕ್ಕೇರಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 38 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಒಂದೇ ದಿನ ಭಾರೀ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿರುವುದು ಜಿಲ್ಲೆಯನ್ನು ಆತಂಕಕ್ಕೆ ದೂಡಿದೆ. ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಭಾರೀ ಅಪಾಯ ತಂದೊಡ್ಡುವ ಎಲ್ಲ ಲಕ್ಷಣ ಕಾಣಿಸುತ್ತಿದೆ.

ಮೂಲ ಪತ್ತೆಯಾಗದವರೇ ಹೆಚ್ಚು!: ರವಿವಾರ ಪ್ರಯೋಗಾಲಯದಿಂದ 378 ಜನರ ವರದಿಗಳು ಬಂದಿದ್ದು, 231 ನೆಗೆಟಿವ್ ಆಗಿದ್ದರೆ, 147 ಪಾಸಿಟಿವ್ ಆಗಿವೆ. ಇದೇ ಮೊದಲ ಬಾರಿಗೆ ಮೂಲವೇ ಪತ್ತೆಯಾಗದೆ ಸೋಂಕು ತಗುಲಿಸಿಕೊಂಡವರ ಸಂಖ್ಯೆ ಅತೀ ಹೆಚ್ಚಾಗಿದ್ದು, 48 ಮಂದಿಗೆ ಎಲ್ಲಿಂದ ಸೋಂಕು ಹರಡಿದೆ ಎನ್ನುವುದೇ ಪತ್ತೆಯಾಗಿಲ್ಲ. ಈ ಸೋಂಕಿತರಿಂದ ಇನ್ನೆಷ್ಟು ಮಂದಿಗೆ ಕೊರೋನ ಹರಡಿದೆಯೋ ಎನ್ನುವ ಆತಂಕವೂ ಹುಟ್ಟಿದೆ.

ಉಳಿದಂತೆ 35 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಹರಡಿದೆ. ತೀವ್ರ ಉಸಿರಾಟ ಸಮಸ್ಯೆಯುಳ್ಳ ಐಎಲ್‌ಐ ಮತ್ತು ತೀವ್ರ ಉಸಿರಾಟದ ಸಮಸ್ಯೆ ಪ್ರಕರಣಗಳು 42 ಇದ್ದು, ವಿದೇಶದಿಂದ ಬಂದ 8 ಮಂದಿಗೆ ಕೊರೋನ ಅಂಟಿಕೊಂಡಿದೆ. ಹೊರರಾಜ್ಯದಿಂದ ಬಂದ 7 ಮಂದಿ, ಒಬ್ಬರು ಗರ್ಭಿಣಿ, ಆಸ್ಪತ್ರೆಗೆ ದಾಖಲಾಗಿದ್ದ ನಾಲ್ವರು, ಮಲೇಷ್ಯಾದಿಂದ ಬಂದ ಹಡಗಿನ ಇಬ್ಬರಿಗೆ ಕೊರೋನ ಪಾಸಿಟಿವ್ ಬಂದಿದೆ.

38 ಮಂದಿ ಡಿಸ್ಚಾರ್ಜ್: ಕೊರೋನ ಸ್ಫೋಟದ ನಡುವೆ ಒಂದೇ ದಿನ 38 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ. ಇವರಲ್ಲಿ 2 ವರ್ಷದ ಮಗು ಹಾಗೂ 80 ವರ್ಷ ವಯಸ್ಸಿನ ವೃದ್ಧೆಯೂ ಸೇರಿದ್ದಾರೆ. ಉಳಿದವರು ಹೆಚ್ಚಿನವರು ಯುವಕ- ಯುವತಿಯರೇ ಆಗಿದ್ದಾರೆ.

ಐಸಿಯು ರೋಗಿಗಳ ಸಂಖ್ಯೆ ಏರಿಕೆ!: ಇದುವರೆಗೆ ಹೆಚ್ಚೆಂದರೆ ನಾಲ್ಕೈದು ಮಂದಿ ಕೊರೋನ ಸೋಂಕಿತರನ್ನು ಐಸಿಯುಗೆ ದಾಖಲಿಸಲಾಗುತ್ತಿತ್ತು. ಒಬ್ಬಿಬ್ಬರಿಗೆ ಮಾತ್ರ ವೆಂಟಿಲೇಟರ್ ಅಳವಡಿಸಲಾಗುತ್ತಿತ್ತು. ಆದರೆ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದಂತೆ ಐಸಿಯುಗೆ ದಾಖಲಾಗುತ್ತಿರುವವರ ಸಂಖ್ಯೆಯೂ ದಿಢೀರನೆ ಏರಿಕೆಯಾಗಿದೆ. ರವಿವಾರ 10 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರಾಗಿದ್ದು, ಬಿಪಿ, ಶುಗರ್, ನ್ಯುಮೋನಿಯಾ, ಹೃದಯ ಕಾಯಿಲೆಯಿಂದ ಬಳಲುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News