ಮಂಗಳೂರು: ಪತ್ನಿಯ ಕೊಲೆಗೈದು ಪರಾರಿಯಾಗಿದ್ದ ಪತಿಯ ಬಂಧನ

Update: 2020-07-05 17:02 GMT
ಗಣೇಶ್ ಕುಮಾರ್

ಮಂಗಳೂರು, ಜು.5: ಬಜ್ಪೆ ಸಮೀಪದ ಕರಂಬಾರು ಅಂತೋಣಿಕಟ್ಟೆಯ ಬಳಿ ಜು.1ರಂದು ರಾತ್ರಿ ಪತ್ನಿಯನ್ನು ಕಲ್ಲಿನ ಕೋರೆಗೆ ದೂಡಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ ಕಾವೂರಿನ ಟಿಪ್ಪರ್ ಚಾಲಕ ಗಣೇಶ್ ಕುಮಾರ್ (35)ನನ್ನು ಕಾವೂರು ಪೊಲೀಸರು ರವಿವಾರ ಬಂಧಿಸಿದ್ದಾರೆ.

ರವಿವಾರ ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಖಚಿತ ಮಾಹಿತಿ ಪಡೆದ ಕಾವೂರು ಪೊಲೀಸ್ ಇನ್ಸ್ ಪೆಕ್ಟರ್ ರಾಘವ ಪಡೀಲ್ ನೇತೃತ್ವದ ಪೊಲೀಸ್ ತಂಡ ಕಾವೂರು ಬಳಿ ಆರೋಪಿಯನ್ನು ದಸ್ತಗಿರಿ ಮಾಡಿದೆ.

ಆರೋಪಿ ಗಣೇಶ್ ಕುಮಾರ್ ಪತ್ನಿ ಶಾಂತಾ (30) ಅವರನ್ನು ಜು.1ರಂದು ಸಂಜೆ ಮನೆಯಿಂದ ಕರೆದುಕೊಂಡು ಹೋಗಿ ಕರಂಬಾರು ಅಂತೋಣಿಕಟ್ಟೆಯ ಬಳಿ ಕಲ್ಲಿನ ಕೋರೆಗೆ ದೂಡಿ ಹಾಕಿ ಕೊಲೆ ಮಾಡಿದ್ದ. ಮರುದಿನ ಸಂಜೆ ಈ ವಿಷಯ ಬಹಿರಂಗವಾಗಿ ರಾತ್ರಿ ಕಾವೂರು ಠಾಣೆ ಪೊಲೀಸರ ಗಮನಕ್ಕೆ ಬಂದಿತ್ತು. ಕೊಲೆ ಮಾಡಿದ ಸ್ಥಳದಲ್ಲಿ ಆಕೆಯ ಪರ್ಸ್ ಹಾಗೂ ಹೆಲ್ಮೆಟ್ ಪತ್ತೆಯಾಗಿತ್ತು.

ಆರೋಪಿ ಗಣೇಶ್ ತಿರುಗಾಡಲು ಕರೆದೊಯ್ಯುವುದಾಗಿ ತಿಳಿಸಿ ಪತ್ನಿಯನ್ನು ಕರೆದೊಯ್ದಿದ್ದ. ಬಳಿಕ ಇಬ್ಬರೂ ಹಿಂತಿರುಗಿ ಮನೆಗೆ ಬಂದಿರಲಿಲ್ಲ. ಮನೆಯಲ್ಲಿ ಅತ್ತೆ ಹಾಗೂ ಆತನ ಇಬ್ಬರು ಮಕ್ಕಳಿದ್ದು, ಮರುದಿನ ಸಂಜೆ ಆತನೇ ಕರೆ ಮಾಡಿ ಪತ್ನಿಯನ್ನು ಕೊಲೆ ಮಾಡಿರುವ ವಿಷಯ ತಿಳಿಸಿದ್ದ. ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿರುವುದಾಗಿ ಆರೋಪಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಗಣೇಶ್ ಮೂಲತಃ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮಲ್ಲಿಪಟ್ಣ ನಿವಾಸಿಯಾಗಿದ್ದು, ಮಂಗಳೂರಿನ ಕಾವೂರು ಮೈದಾನ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ.

2 ದಿನ ಪೊಲೀಸ್ ಕಸ್ಟಡಿ: ಆರೋಪಿಗೆ ಕೊರೋನ ಪರೀಕ್ಷೆ ಮಾಡಿಸಬೇಕಾಗಿರುವ ಹಿನ್ನೆಲೆಯಲ್ಲಿ ಎರಡು ದಿನಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News