ಕೃಷ್ಣ ಮಠದಲ್ಲಿ ಚಾತುರ್ಮಾಸ್ಯ ವೃತ ಪ್ರಾರಂಭ

Update: 2020-07-05 17:07 GMT

ಉಡುಪಿ, ಜು.5: ವಿಶ್ವದಾದ್ಯಂತ ಕೊರೋನ ವೈರಸ್‌ನ ಕಾಟದಿಂದ ಜನಜೀವನ ಅಸ್ತವ್ಯಸ್ತಗೊಂಡಿರುವ ಹಿನ್ನೆಲೆಯಲ್ಲಿ ಉಡುಪಿಯ ಅಷ್ಟಮಠಗಳ ಸ್ವಾಮೀಜಿಗಳ ಪೈಕಿ ಐವರು ಶ್ರೀಪಾದರು ಇಂದು ಶ್ರೀಕೃಷ್ಣ ಮಠದಲ್ಲೇ ತಮ್ಮ ಈ ಬಾರಿಯ ಚಾತುರ್ಮಾಸ್ಯ ವ್ರತದ ಸಂಕಲ್ಪ ಕೈಗೊಂಡಿದ್ದಾರೆ.

ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಇಂದು ಶ್ರೀಕೃಷ್ಣ ಮಠದ ದೇವರ ಮುಂಭಾಗದಲ್ಲಿ ಶಾರ್ವರಿ ಸಂವತ್ಸರದ ಚಾತುರ್ಮಾಸ್ಯ ವ್ರತದ ಸಂಕಲ್ಪವನ್ನು ಮಾಡಿದರು.

ಅದಮಾರು ಮಠದ ಹಿರಿಯ ಯತಿಗಳಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ಜು.10ರಂದು ಶ್ರೀಕೃಷ್ಣ ಮಠದಲ್ಲಿ ತಮ್ಮ ಚಾತುರ್ಮಾಸ್ಯ ವೃತ ಪ್ರಾರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.

ನೀಲಾವರ ಗೋಶಾಲೆಯಲ್ಲಿ ಪೇಜಾವರಶ್ರೀ: ಉಡುಪಿಯ ಶ್ರೀಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಬ್ರಹ್ಮಾವರ ಸಮೀಪದ ನೀಲಾವರದಲ್ಲಿ ತಾವು ನಡೆಸುತ್ತಿರುವ ನೀಲಾವರ ಗೋಶಾಲೆಯ ಆವರಣದಲ್ಲಿ ರುವ ಶ್ರೀಮಠದ ಶಾಖಾ ಮಠದಲ್ಲಿ ರವಿವಾರ ತಮ್ಮ ಚಾತುರ್ಮಾಸ್ಯ ವೃತ ಸಂಕಲ್ಪ ಸ್ವೀಕರಿಸಿದರು.

ಹದಿನೈದು ವರ್ಷಗಳ ಹಿಂದೆ ನಿರ್ಮಾಣವಾಗಿ ಇಂದು ಸುಮಾರು 1500ಕ್ಕೂ ಅಧಿಕ ಗೋವುಗಳ ಆಶ್ರಯತಾಣವಾಗಿರುವ ನೀಲಾವರ ಗೋಶಾಲೆಯಲ್ಲಿ ಶ್ರೀಗಳು ನಡೆಸುತ್ತಿರುವ ಪ್ರಥಮ ಚಾತುರ್ಮಾಸ್ಯ ವೃತ ಇದಾಗಿದೆ. ಅಲ್ಲದೇ ತಮ್ಮ ಗುರುಗಳಾದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಅಗಲಿದ ನಂತರ ಪೇಜಾವರ ಮಠದ ಉತ್ತರಾಧಿಕಾರಿಯಾಗಿ ಶ್ರೀಗಳು ನಡೆಸುತ್ತಿರುವ ಪ್ರಮ ಚಾತುರ್ಮಾಸ್ಯ ವೃತ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News