ರವಿವಾರದ ಲಾಕ್ ಡೌನ್‍ಗೆ ಭಟ್ಕಳ ನಗರ ಸ್ತಬ್ಧ

Update: 2020-07-05 17:53 GMT

ಭಟ್ಕಳ: ರವಿವಾರ ಲಾಕ್‍ಡೌನ್‍ಗೆ ಭಟ್ಕಳದ ಜನತೆ ಸಂಪೂರ್ಣ ಸಹಕಾರ ನೀಡಿದ್ದು ಬೆಳಿಗ್ಗೆಯಿಂದ ಯಾವುದೇ ಜನ ಸಂಚಾರ ಕಂಡು ಬಂದಿಲ್ಲ.  ಈ ಹಿಂದೆ ಲಾಕ್‍ಡೌನ್ ಇದ್ದಾಗ ಜನರ ಓಡಾಟ ಕಂಡು ಬರುತ್ತಿತ್ತಾದರೂ ರವಿವಾರದ ಲಾಕ್‍ಡೌನ್‍ನಲ್ಲಿ ಮಾತ್ರ ಭಟ್ಕಳ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ಸಂಪೂರ್ಣ ಸ್ತಬ್ದವಾಗಿರುವುದು ಕಂಡು ಬಂತು. 

ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್-19 ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಜು.5 ರಿಂದ ಅ.2ರ ತನಕ ಶನಿವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯ ತನಕ ಕಟ್ಟುನಿಟ್ಟಿನ ಕಫ್ರ್ಯೂ ಜ್ಯಾರಿ ಮಾಡಿದ್ದು ಪ್ರಥಮ ದಿನವೇ ಯಶಸ್ವಿಯಾಗಿದೆ. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಭಟ್ಕಳದಲ್ಲಿ ಕೆಲವು ದಿನಗಳಿಂದ ಕೊರೋನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಜಿಲ್ಲಾಡಳಿತ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯ ತನಕ ಕಟ್ಟುನಿಟ್ಟಿನ ಲಾಕ್‍ಡೌನ್ ಆದೇಶ ನೀಡಿದ್ದರಿಂದ ಭಟ್ಕಳದಲ್ಲಿ ಮಾತ್ರ ಶನಿವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯ ತನಕ ಒಟ್ಟೂ 36 ತಾಸುಗಳ ಲಾಕ್‍ಡೌನ್ ಮುಂದುವರಿದಿತ್ತು. 

ರವಿವಾರದ ಲಾಕ್‍ಡೌನ್ ಸಂದರ್ಭದಲ್ಲಿ ಪಟ್ಟಣದಲ್ಲಿ ಮೆಡಿಕಲ್ ಶಾಪ್‍ಗಳು ಹೊರತುಪಡಿಸಿ ಬೇರೆ ಯಾವುದೇ ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆದಿರಲಿಲ್ಲ.

ಸಂಪೂರ್ಣ ಲಾಕಡೌನ್‍ನಿಂದಾಗಿ ಭಟ್ಕಳ ಪಟ್ಟಣ ಸೇರಿದಂತೆ ವಿವಿಧ ಕಡೆ ರಸ್ತೆಗಳು ಬಿಕೋ ಎನ್ನುತ್ತಿತ್ತು. ಲಾಕಡೌನ್ ಇದ್ದುದರಿಂದ ಪಟ್ಟಣದ ಆಯಕಟ್ಟಿನ ಪ್ರದೇಶದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News