ಚೀನಾದಿಂದ ಬಂದ ವೈರಸ್ ಎಲ್ಲವನ್ನು ಹಾಳುಮಾಡಿತು: ಟ್ರಂಪ್

Update: 2020-07-05 18:00 GMT

ವಾಶಿಂಗ್ಟನ್, ಜು. 5: ಚೀನಾದ ವಿರುದ್ಧ ಮತ್ತೊಂದು ಸುತ್ತಿನ ವಾಗ್ದಾಳಿಯನ್ನು ಆರಂಭಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದಿಂದ ಬಂದ ವೈರಸ್ ದೇಶವನ್ನು ಸಂಕಷ್ಟಕ್ಕೀಡು ಮಾಡುವ ಮೊದಲು ಅಮೆರಿಕ ತುಂಬಾ ಚೆನ್ನಾಗಿತ್ತು ಎಂದು ಹೇಳಿದ್ದಾರೆ. ಅಮೆರಿಕದ 244ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ‘ಸಲ್ಯೂಟ್ ಟು ಅಮೆರಿಕ’ ರ್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

‘‘ದಶಕಗಳಿಂದ ಅಮೆರಿಕದಿಂದ ಪ್ರಯೋಜನ ಪಡೆದುಕೊಂಡಿರುವ ದೇಶಗಳಿಗೆ ನಾವು ಹೆಚ್ಚುವರಿ ತೆರಿಗೆಯನ್ನು ವಿಧಿಸಿದ್ದೇವೆ. ಅದರಿಂದಾಗಿ ನಮಗೆ ಉತ್ತಮ ವ್ಯಾಪಾರ ಒಪ್ಪಂದಗಳನ್ನು ಹೊಂದಲು ಸಾಧ್ಯವಾಯಿತು. ಈಗ ಅವೇ ದೇಶಗಳು ಹತ್ತಾರು ಬಿಲಿಯ ಡಾಲರ್‌ಗಳಷ್ಟು ಹಣವನ್ನು ಅಮೆರಿಕದ ಖಜಾನೆಗೆ ಪಾವತಿಸುತ್ತಿವೆ. ಆದರೆ, ಆ ಹೊತ್ತಿನಲ್ಲಿ ನಾವು ಚೀನಾದಿಂದ ಬಂದ ವೈರಸ್‌ನ ದಾಳಿಗೆ ಗುರಿಯಾದೆವು’’ ಎಂದು ಟ್ರಂಪ್ ಹೇಳಿದರು.

‘‘ನಿಗೂಢತೆಯಿಂದ ವ್ಯವಹರಿಸುವ, ವಂಚನೆಗಳನ್ನು ನಡೆಸುವ ಮತ್ತು ವಿಷಯಗಳನ್ನು ಮುಚ್ಚಿಹಾಕುವ ಪ್ರವೃತ್ತಿಯುಳ್ಳ ಚೀನಾದಿಂದಾಗಿ ವೈರಸ್ ಈಗ ಜಗತ್ತಿನೆಲ್ಲೆಡೆ ಹರಡಿದೆ. ಅದಕ್ಕಾಗಿ ಚೀನಾವನ್ನು ಸಂಪೂರ್ಣವಾಗಿ ಹೊಣೆಯಾಗಿಸಬೇಕಾಗಿದೆ’’ ಎಂದು ಟ್ರಂಪ್ ನುಡಿದರು.

4 ಕೋಟಿ ಜನರಿಗೆ ಕೊರೋನ ಪರೀಕ್ಷೆ

ಅಮೆರಿಕದಲ್ಲಿ ಈವರೆಗೆ ಬಹುತೇಕ 4 ಕೋಟಿ ಜನರನ್ನು ಕೊರೋನ ವೈರಸ್ ಪರೀಕ್ಷೆಗೆ ಒಳಪಡಿಸಲಾಗಿದೆ. ಹಾಗಾಗಿ, ಬೇರೆ ಯಾವುದೇ ದೇಶದಲ್ಲಿ ವರದಿಯಾಗದಷ್ಟು ಕೊರೋನ ವೈರಸ್ ಸೋಂಕು ಪ್ರಕರಣಗಳು ಅಮೆರಿಕದಲ್ಲಿ ವರದಿಯಾಗುತ್ತಿವೆ. ಇದು ಯಾಕೆಂದರೆ, ಬೇರೆ ಯಾವುದೇ ದೇಶವು ನಮ್ಮಷ್ಟು ಪರೀಕ್ಷೆಗಳನ್ನು ನಡೆಸುತ್ತಿಲ್ಲ. ನಾವು ಅತ್ಯಂತ ಉತ್ಕಷ್ಟ ಪರೀಕ್ಷಾ ಸಲಕರಣೆಗಳನ್ನು ಹೊಂದಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News