ಭಟ್ಕಳ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸೇರಿದಂತೆ 45 ಮಂದಿಗೆ ಕೊರೋನ ಸೋಂಕು ದೃಢ

Update: 2020-07-06 11:56 GMT
ಸಾಂದರ್ಭಿಕ ಚಿತ್ರ

ಭಟ್ಕಳ: ಉತ್ತರಕನ್ನಡ ಜಿಲ್ಲಾದ್ಯಂತ ಕೊರೋನ ಸೋಂಕಿನ ಆತಂಕ ಹೆಚ್ಚಾಗುತ್ತಲೆ ಇದ್ದು, ಸೋಮವಾರ 80ಕ್ಕೂ ಹೆಚ್ಚು ಮಂದಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದ್ದು ಭಟ್ಕಳ ನಗರವೊಂದರಲ್ಲೇ 45 ಮಂದಿಗೆ ಸೊಂಕು ಇರುವುದು ದೃಢಪಟ್ಟಿದೆ. 

ಸೋಮವಾರ ದೃಢಪಟ್ಟ ಸೋಂಕಿತರ ಪೈಕಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ, ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ಪರೀಕ್ಷಾ ಲ್ಯಾಬ್ ಸಿಬ್ಬಂದಿಯೂ ಇರುವುದು ಭಟ್ಕಳದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಒಟ್ಟು 11 ಮಹಿಳೆಯರು, ಓರ್ವ ಯುವತಿ, ಓರ್ವ ಬಾಲಕಿ, 19 ಪುರುಷರಿಗೆ, 7 ಯುವಕರಿಗೆ, ಆರು ಬಾಲಕರಿಗೆ ಸೋಂಕು ದೃಢಪಟ್ಟಿದೆ.

ಮಧ್ಯಾಹ್ನ 2ಗಂಟೆಯಿಂದ ಬೆಳಿಗ್ಗೆ 6 ಗಂಟೆ ವರೆಗೆ ಲಾಕ್ ಡೌನ್: ಭಟ್ಕಳ ಪುರಸಭೆ, ಜಾಲಿ ಪ.ಪಂ ಹಾಗೂ ಹೆಬಳೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಮಧ್ಯಾಹ್ನ 2ಗಂಟೆಯಿಂದ ಬೆಳಿಗ್ಗೆ 6 ಗಂಟೆ ವರೆಗೆ ಸಂಪೂರ್ಣ ಲಾಕ್ಡೌನ್ ವಿಧಿಸಲಾಗಿದೆ ಎಂದು ಭಟ್ಕಳ ಸಹಾಯಕ ಆಯುಕ್ತ ಭರತ್ ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದು, ವೈದ್ಯಕೀಯ ಕಾರಣ ಹೊರತು ಪಡಿಸಿ ಬೇರೆ ಯಾವುದೇ ಕಾರಣಕ್ಕೂ ಸಾರ್ವಜನಿಕರು ಹೊರಗಡೆ ಬರದಂತೆ ನಿರ್ಬಂಧವನ್ನು ಹೇರಲಾಗಿದೆ ಎಂದು ತಿಳಿಸಿದ್ದಾರೆ. 

ಸಂಪೂರ್ಣ ಲಾಕ್ ಡೌನ್ ಗಾಗಿ ಸಾರ್ವಜನಿಕರಿಂದ ವಾಟ್ಸಪ್ ಅಭಿಯಾನ: ಭಟ್ಕಳದಲ್ಲಿ ದಿನೆ ದಿನೆ ಹೆಚ್ಚುತ್ತಿರುವ ಕೊರೋನ ಪ್ರಕರಣವನ್ನು ನಿಯಂತ್ರಿಸುವ ಕುರಿತಂತೆ ಸಾರ್ವಜನಿಕರಿಂದ ಜಿಲ್ಲಾ ಹಾಗೂ ತಾಲೂಕಾಡಳಿತದ ಮೇಲೆ ಒತ್ತಡಗಳು ಹೆಚ್ಚುತ್ತಿದ್ದು ಈ ನಿಟ್ಟಿನಲ್ಲಿ ಮುಂದಿನ 15ದಿನಗಳ ಕಾಲ ಭಟ್ಕಳ ನಗರ ಸಂಪೂರ್ಣ ಲಾಕ್ಡೌನ್ ಗಾಗಿ ವಾಟ್ಸಪ್ ಅಭಿಯಾನವೊಂದು ಆರಂಭಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News