ಗುರುಪುರದಲ್ಲಿ ಗುಡ್ಡ ಕುಸಿತದ ಭೀತಿ: ಮನೆ ಖಾಲಿ ಮಾಡುತ್ತಿರುವ ಕುಟುಂಬಗಳು

Update: 2020-07-06 14:57 GMT

ಮಂಗಳೂರು, ಜು.6: ನಗರದ ಹೊರವಲಯ ಗುರುಪುರದ ಬಂಗ್ಲೆಗುಡ್ಡೆಯಲ್ಲಿ ರವಿವಾರವಷ್ಟೇ ಗುಡ್ಡ ಕುಸಿತಕ್ಕೆ ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳು ಮೃತಪಟ್ಟ ದುರಂತಕ್ಕೆ ಇಡೀ ರಾಜ್ಯವೇ ಮಮ್ಮಲ ಮರುಗಿತ್ತು. ಇಲ್ಲಿ ಮತ್ತೆ ಗುಡ್ಡ ಕುಸಿತದ ಭೀತಿ ಎದುರಾಗಿದೆ.

ಈ ಪ್ರದೇಶದಲ್ಲಿ ಸೋಮವಾರ ಸ್ಮಶಾನ ಮೌನ ಆವರಿಸಿತ್ತು. ಗುಡ್ಡದ ಪ್ರತಿಯೊಂದು ಕಡೆಯಲ್ಲೂ ಮನೆ ಖಾಲಿ ಮಾಡಿದ ಕುಟುಂಬಗಳ ಸದಸ್ಯರು ಭವಿಷ್ಯದ ಕಷ್ಟದ ದಿನಗಳು ಮತ್ತು ಸರಕಾರದಿಂದ ತಮಗೆ ಸಿಗಬಹುದಾದ ಪರಿಹಾರ ನಿರೀಕ್ಷೆಯಲ್ಲಿದ್ದಾರೆ. ಒಂದೊಮ್ಮೆ ಜೋರಾಗಿ ಮಳೆ ಸುರಿದರೆ ಇಲ್ಲಿ ಮತ್ತಷ್ಟು ಗುಡ್ಡದ ಮಣ್ಣು ಕುಸಿದು ದುರಂತದ ಮೇಲೊಂದು ದುರಂತ ಸಂಭವಿಸುವುದನ್ನು ತಳ್ಳಿಹಾಕುವಂತಿಲ್ಲ.

ಮಣ್ಣು ಜರಿದ ಪ್ರದೇಶದಲ್ಲಿ ಎರಡು ಮನೆಗಳು ಯಾವುದೇ ಕ್ಷಣದಲ್ಲಾದರೂ ಬೀಳುವ ಸಾಧ್ಯತೆ ಇದೆ. ಈ ಮನೆಗಳಿಗೆ ಹೊಂದಿಕೊಂಡಿರುವ ಇನ್ನೂ ಹತ್ತಾರು ಮನೆಗಳ ಸ್ಥಿತಿಯೂ ಅತಂತ್ರವಾಗಿದ್ದು, ಅಪಾಯವನ್ನರಿತು ಕುಟುಂಬಿಕರು ಈಗಾಗಲೇ ಮನೆ ಖಾಲಿ ಮಾಡಿದ್ದಾರೆ. ಕೆಲವರು ಸಂಬಂಧಿಕರ ಮನೆಗಳಿಗೆ ಹೋಗಿದ್ದರೆ, ಸೋಮವಾರ ಬೆಳಗ್ಗೆ ಮತ್ತಷ್ಟು ಕುಟುಂಬಗಳ ಸದಸ್ಯರು ಮನೆ ಸೊತ್ತು ಖಾಲಿ ಮಾಡುತ್ತಿದ್ದ ದೃಶ್ಯ ಕಂಡು ಬಂತು.

ಅಶ್ರಫ್ ಮತ್ತು ನೆಫಿಸಾರ ಮನೆ ಯಾವುದೇ ಕ್ಷಣದಲ್ಲಿ ಬೀಳಬಹುದು. ಇವರ ಮನೆಗಳು ಸಂಪೂರ್ಣ ಬಿರುಕು ಬಿಟ್ಟಿದೆ. ಈ ಮನೆಗಳ ಕೆಳಗಡೆ ಇದ್ದ ಎರಡು(ಮುಹಮ್ಮದ್ ಯಾನೆ ಮೋನು ಮತ್ತು ಅವರ ಪುತ್ರ ಅಶ್ರಫ್) ಮನೆಗಳು ರವಿವಾರದ ದುರಂತದಲ್ಲಿ ಧರಾಶಾಯಿಯಾಗಿವೆ. ಈ ಮನೆಗಳಿಗೆ ಹೊಂದಿಕೊಂಡಿದ್ದ 10ಕ್ಕೂ ಹೆಚ್ಚು ಕುಟುಂಬಗಳು ಮನೆ ಖಾಲಿ ಮಾಡಿವೆ.

ಇದು ಗುಡ್ಡ ಕುಸಿತ ಸಂಭವಿಸಿದ ಮೇಲ್ಗಡೆಯವರ ಸ್ಥಿತಿಯಾಗಿದ್ದರೆ, ಗುಡ್ಡದ ಕೆಳಗಡೆ ರಸ್ತೆಗೆ ಹೊಂದಿಕೊಂಡು ಇನ್ನೂ 40ಕ್ಕೂ ಹೆಚ್ಚು ಮನೆಗಳು ಅಪಾಯದಂಚಿನಲ್ಲಿವೆ. ಈಗಾಗಲೇ ಸುಮಾರು 30 ಮನೆಯವರು ಸರಕಾರಿ ಆಶ್ರಯಗಳಿಗೆ ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಆದಾಗ್ಯೂ, ಇಲ್ಲಿ ಮತ್ತೆ ಗುಡ್ಡೆ ಕುಸಿತದ ಭೀತಿ ಎದುರಾಗಿದ್ದು, ಭವಿಷ್ಯದಲ್ಲಿ ಕೊಡಗಿನಂತಹ ದುರಂತವೊಂದು ಸಂಭವಿಸುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು.

‘ಭವಿಷ್ಯದ ದುರಂತದಿಂದ ರಕ್ಷಿಸಿ’: ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಗ್ರಾಮದ ಬಂಗ್ಲೆಗುಡ್ಡೆ, ಮಠದಗುಡ್ಡೆ ಹಾಗೂ ಅಣೆಬಳಿ ಗುಡ್ಡೆಯಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ ಮಳೆನೀರು ಸರಾಗವಾಗಿ ಹರಿಯಲು ತೋಡು, ಚರಂಡಿ ನಿರ್ಮಿಸಲಾಗಿದೆ. ಇಲ್ಲಿರುವ ಕೆಲ ಮನೆಗಳ ದಟ್ಟಣೆಯಿಂದ ತೋಡು, ಚರಂಡಿ, ಮೋರಿಗಳು ಮಾಯವಾಗಿದ್ದು, ಮಳೆನೀರು ಗುಡ್ಡದಲ್ಲೇ ಇಂಗುವ ದುಃಸ್ಥಿತಿ ಇದೆ.

ಗುಡ್ಡದಲ್ಲಿ ನೀರಿನ ಒರತೆ ಸೃಷ್ಟಿಯಾಗಿ ಮಣ್ಣು ಸಡಿಲಗೊಂಡಿದೆ. ಗುಡ್ಡದ ಮಣ್ಣು ಸಡಿಲಗೊಂಡಿರುವುದೇ ರವಿವಾರದ ದುರಂತಕ್ಕೆ ಪ್ರಬಲ ಕಾರಣವೆಂದು ಶಂಕೆ ವ್ಯಕ್ತಪಡಿಸಲಾಗಿದೆ. ಇಲ್ಲಿ ಇನ್ನಷ್ಟು ಗುಡ್ಡ ಕುಸಿದರೆ ಮೇಲ್ಗಡೆಯ ಕಾಂಕ್ರಿಟ್ ರಸ್ತೆ ಸಹಿತ ಬೃಹತ್ ಬಂಡೆಗಳಿರುವ ಗುಡ್ಡವೂ ಕುಸಿಯುವ ಸಾಧ್ಯತೆ ಇದೆ. ಆಗ ಈ ದುರಂತವು ಇನ್ನಷ್ಟು ವಿರಾಟ ಸ್ವರೂಪ ಪಡೆಯಲೂಬಹುದಾಗಿದೆ. ಇಲ್ಲಿರುವ ಎಲ್ಲ ಮನೆಯವರಿಗೆ ಬೇರೆಡೆ ವ್ಯವಸ್ಥೆ ಮಾಡಿದರೆ ಮಾತ್ರ ಇಲ್ಲಿ ಸಂಭವಿಸಬಹುದಾದ ಭವಿಷ್ಯದ ದುರಂತಗಳಿಂದ ಜನರಿಗೆ ರಕ್ಷಣೆ ನೀಡಿದಂತಾಗಬಹುದು ಎನ್ನುವುದು ಸ್ಥಳೀಯ ಅಭಿಪ್ರಾಯ.

ಮನೆ ಕಳೆದುಕೊಂಡಿರುವ ಮೋನು ಮತ್ತು ಅವರ ಪುತ್ರ ಅಶ್ರಫ್ ಈಗ ಮೂಡುಶೆಡ್ಡೆಯ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಮಕ್ಕಳಿಬ್ಬರನ್ನು ಕಳೆದುಕೊಂಡಿರುವ ಶರೀಫ್ ಮತ್ತು ಇನ್ನಿಬ್ಬರು ಮಕ್ಕಳು ಕೂಡ ಮೂಡುಶೆಡ್ಡೆಯಲ್ಲೇ ಇದ್ದಾರೆ. ಸೋಮವಾರ ಬೆಳಗ್ಗೆ ಮೂಡುಶೆಡ್ಡೆಗೆ ಭೇಟಿ ನೀಡಿದ ದ.ಕ. ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸರಕಾರದ ಪರಿಹಾರ ಚೆಕ್ ವಿತರಿಸಿದರು.

ಪಂಚಾಯತ್ ನೆರವು: ಗುರುಪುರ ಪಂಚಾಯತ್ ಆಡಳಿತವು ಸಂತ್ರಸ್ತ 15 ಕುಟುಂಬಗಳಿಗೆ ಗುರುಪುರ ಹೈಸ್ಕೂಲ್ ಹಾಗೂ ಇತರೆಡೆ ರವಿವಾರವೇ ವಾಸ್ತವ್ಯ ವ್ಯವಸ್ಥೆ ಮಾಡಿದ್ದು, ಉಳಿದ 15 ಕುಟುಂಬಗಳಿಗೆ ಎಡಪದವಿನ ಖಾಸಗಿ ಕಟ್ಟಡವೊಂದರಲ್ಲಿ ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ಮಾಡಿದೆ. ಕಟ್ಟಡದ ಬಾಡಿಗೆ ಪಂಚಾಯತ್ ಭರಿಸಲಿದೆ. ಇವರಿಗೆ ಬೇರೆಡೆ ಶಾಶ್ವತ ಮನೆ ನಿರ್ಮಿಸಿ ಕೊಡುವಲ್ಲಿ ಜಿಲ್ಲಾಡಳಿತದ ಮಾರ್ಗದರ್ಶನದಂತೆ ಪಂಚಾಯತ್ ಆಡಳಿತ ಕೆಲಸ ಮಾಡಲಿದೆ. ಪಂಚಾಯತ್‌ನಲ್ಲಿ ಸಂತ್ರಸ್ತರ ಸಭೆ ಕರೆದು ಮಾತುಕತೆ ನಡೆಸಲಾಗಿದೆ ಎಂದು ಪಂಚಾಯತ್ ಪಿಡಿಒ ಅಬೂಬಕರ್ ತಿಳಿಸಿದರು. ಅವರೊಂದಿಗೆ ಪಂಚಾಯತ್ ಅಧ್ಯಕ್ಷೆ ರುಕಿಯಾ, ತಾಪಂ ಸದಸ್ಯ ಸಚಿನ್ ಅಡಪ ಹಾಗೂ ಪಂಚಾಯತ್ ಸದಸ್ಯರಿದ್ದರು.

ಸಂತ್ರಸ್ತರ ಸಭೆ: ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮನೆ ಖಾಲಿ ಮಾಡಿದ ಸಂತ್ರಸ್ತರಿಗೆ ಶಾಸ್ವತ ಹಾಗೂ ತಾತ್ಕಾಲಿಕ ವಸತಿ ಕಲ್ಪಿಸುವ ವಿಷಯದಲ್ಲಿ ಚರ್ಚೆ ನಡೆಯಿತು.

35 ಕುಟುಂಬಗಳಿಗೆ ಪರಿಸ್ಥಿತಿ ತಿಳಿಯಾಗುವವರೆಗೆ ಹಾಗೂ ಉಳಿದ 55 ಕುಟುಂಬಿಕರಿಗಾಗಿ ಜಿಲ್ಲಾಡಳಿತ ಸೂಚಿಸಿದ ಕಟ್ಟಡಕ್ಕೆ ಸರಕಾರವೇ ಬಾಡಿಗೆ ಪಾವತಿಸಿದರೆ, ಪ್ರತ್ಯೇಕವಾಗಿ ಬಾಡಿಗೆ ಮನೆಗಳಲ್ಲಿ ವಾಸ್ತವ್ಯ ಹೂಡುವವರಿಗೆ ತಿಂಗಳಿಗೆ ತಲಾ 2,500 ರೂ. ನೀಡಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಸಂತ್ರಸ್ತರೊಂದಿಗೆ ಉಪ-ತಹಶೀಲ್ದಾರ್ ಶಿವಪ್ರಸಾದ್, ಕಂದಾಯ ನಿರೀಕ್ಷಕ, ಪಿಡಿಒ ಅಬೂಬಕರ್, ತಾಪಂ ಸದಸ್ಯ ಸಚಿನ್ ಅಡಪ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News