​ರಾಜ್ಯ ಸರಕಾರ ‘ಕೋವಿಡ್’ನಿಂದ 3 ಸಾವಿರ ಕೋ.ರೂ. ಹಗರಣ: ಎಸ್ಡಿಪಿಐ ಆರೋಪ

Update: 2020-07-06 15:27 GMT

ಮಂಗಳೂರು, ಜು.6: ರಾಜ್ಯ ಸರಕಾರವು ಕೋವಿಡ್-19 ನಿರ್ವಹಣೆಗಾಗಿ ಈವರೆಗೆ ಮೂರು ಸಾವಿರದ ಮುನ್ನೂರ ತೊಂಬತ್ತೆರಡು (3392) ಕೋ.ರೂ. ಖರ್ಚು ಮಾಡಿರುವುದಾಗಿ ಹೇಳಿಕೊಂಡಿದೆ. ಯಾವ ಯಾವ ವಿಷಯಕ್ಕೆ ಎಷ್ಟು ಖರ್ಚು ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಮೂಲಕ ಕೇಳಿದಾಗ ಆಡಿಟ್ ಆಗಬೇಗು ಎಂಬ ಮಾಹಿತಿಯನ್ನು ರವಾನಿಸುವ ಮೂಲಕ ತಪ್ಪಿಸಿ ಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಎಸ್ಡಿಪಿಐ ರಾಜ್ಯ ಉಪಾಧ್ಯಕ್ಷ ಮಜೀದ್ ಖಾನ್ ಆರೋಪಿಸಿದ್ದಾರೆ.
 
500 ಮಿ.ಲಿ ಸ್ಯಾನಿಟೈಸರ್ ಒಂದಕ್ಕೆ ರಾಜ್ಯ ಸರಕಾರದ ಅಂಗಸಂಸ್ಥೆ ‘ಕರ್ನಾಟಕ ಲಾಜಿಸ್ಟಿಕ್ ಲಿಮಿಟೆಡ್’ ಸಂಸ್ಥೆಯು 78 ರೂ.ನಂತೆ ಪೂರೈಕೆ ಮಾಡಬಹುದು ಎಂದು ಟೆಂಡರ್ ಹಾಕಿದಾಗ ಹೇಳಿಕೊಂಡಿದೆ. ಆದರೆ ಅವರನ್ನು ಹೊರತುಪಡಿಸಿ 1 ಚಿಕ್ಕ ಬಾಟಲ್ ಸ್ಯಾನಿಟೈಸರಿಗೆ 600 ರೂ.ರಂತೆ ಖರೀದಿ ಮಾಡಲಾಗಿದೆ. 1 ಥರ್ಮಲ್ ಸ್ಕ್ಯಾನರ್ ಬೆಲೆ ಗರಿಷ್ಠ 3,650 ರೂ.ಮಾತ್ರ. ಆದರೆ ಈ ಸಂಸ್ಥೆಯು 9 ಸಾವಿರ ರೂ. ಎಂದು ಉಲ್ಲೇಖಿಸಿದೆ. ಕಂದಾಯ ಅಧಿಕಾರಿ ಮಂಜುನಾಥ್ ಪ್ರಸಾದ್ ಹೈಕೋರ್ಟ್ಗೆ ಹಾಕಿರುವ ಅಫಿದವಿತ್ನಲ್ಲಿ ರಾಜ್ಯದಲ್ಲಿ 81ಲಕ್ಷ ಆಹಾರ ಪ್ಯಾಕೆಟ್ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಒಂದು ಪ್ಯಾಕೆಟ್ಗೆ ಗರಿಷ್ಠ 250 ರೂ. ಖರ್ಚು ಆಗಬಹುದು. ಆದರೆ ಇವರು 250 ರಿಂದ 1,650 ರೂ.ನಷ್ಟು ಖರ್ಚು ಮಾಡಿರುವುದಾಗಿ ಉಲ್ಲೇಖಿಸಿದ್ದಾರೆ. ಇದು ಹಗಲು ದರೋಡೆಯಾಗಿದೆ. 1 ವೆಂಟಿಲೇಟರ್ ಬೆಲೆ ಸುಮಾರು ನಾಲ್ಕರಿಂದ ಐದು ಲಕ್ಷ ರೂಪಾಯಿ. ಆದರೆ ಸರಕಾರ 12 ಲಕ್ಷದಂತೆ 1,000 ವೆಂಟಿಲೇಟರ್ಗಳನ್ನು ಖರೀದಿ ಮಾಡಿದೆ.

ಇದೇ ತರಹ ಮಾಸ್ಕ್, ಸರ್ಜಿಕಲ್ ಕೈ- ಗ್ಲವಸ್, ಪರೀಕ್ಷಾ ಕೈ-ಗ್ಲವಸ್, ಆಕ್ಸಿಜನ್ ಸಿಲಿಂಡರ್ಗಳಲ್ಲಿ ದುಪ್ಪಟ್ಟು ಹಣದ ಲೆಕ್ಕ ತೋರಿಸಿ ಜನರಿಗೆ ಮೋಸ ಮಾಡಿದೆ. ರಾಜ್ಯದಲ್ಲಿ 6.2 ಲಕ್ಷ ಜನರಿಗೆ ಕೋವಿಡ್-19 ಟೆಸ್ಟ್ ಮಾಡಲಾಗಿದೆ ಎಂದು 530 ಕೋ.ರೂ. ಕ್ಲೈಮ್ ಮಾಡಿದ್ದಾರೆ. ಸರಕಾರ ನಿಗದಿಪಡಿಸಿದಂತೆ ಒಬ್ಬರಿಗೆ 4,000 ರೂ.ಗಳ ಪ್ರಕಾರ 240 ಕೋ.ರೂ. ಆಗಬೇಕು. ಆದರೆ 530 ಕೋ.ರೂ. ಕ್ಲೈಮ್ ಮಾಡಿರುವುದು ಅಕ್ಷಮ್ಯ. ಅದೇ ರೀತಿ ಮಾಹಿತಿ ಕಿಯೋಸ್ಕ್, ಸೋಂಕಿತರ ಖರ್ಚು ಇತ್ಯರ್ಥಕ್ಕೆ ಹೆಸರುಗಳಿಂದ ಕೋಟ್ಯಾಂತರ ರೂ.ಗಳನ್ನು ಲೂಟಿ ಮಾಡಿದ್ದಾರೆ. ಈ ಹಗರಣದ ನೈತಿಕ ಹೊಣೆ ಹೊತ್ತು ತಕ್ಷಣ ಅರೋಗ್ಯ ಸಚಿವರು ರಾಜೀನಾಮೆ ನೀಡಬೇಕು ಮತ್ತು ಹಗರಣದಲ್ಲಿ ಕಂದಾಯ ಸಚಿವ ಆರ್. ಅಶೋಕ್ರ ಹೆಸರು ಕೇಳಿ ಬಂದಿರುವುದರಿಂದ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಪಡೆಯಬೇಕು ಅಲ್ಲದೆ ಈ ಹಗರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News