ಉಡುಪಿ: ಸೋಮವಾರ 40 ಮಂದಿಗೆ ಕೊರೋನ ಸೋಂಕು ದೃಢ

Update: 2020-07-06 16:11 GMT

ಉಡುಪಿ, ಜು.5: ಜಿಲ್ಲೆಯಲ್ಲಿ ಸೋಮವಾರ 40 ಮಂದಿಯಲ್ಲಿ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕು ಪತ್ತೆಯಾಗಿದೆ. ಶಂಕಿತರ ಗಂಟಲುದ್ರವ ಮಾದರಿಯ ಪರೀಕ್ಷೆಯಲ್ಲಿ ಇಂದು 40 ಮಂದಿ ಸೋಂಕಿಗೆ ಪಾಸಿಟಿವ್ ಆಗಿದ್ದರೆ 466 ಮಂದಿಯ ಮಾದರಿ ನೆಗೆಟಿವ್ ಫಲಿತಾಂಶವನ್ನು ನೀಡಿದೆ. ಇಂದು ಮತ್ತೆ 718 ಮಂದಿಯ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದ 40 ಮಂದಿಯಲ್ಲಿ ಮಹಾರಾಷ್ಟ್ರದಿಂದ ಬಂದ ಆರು ಮಂದಿ, ತೆಲಂಗಾಣದಿಂದ ಬಂದ ಒಬ್ಬರು, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದ 10 ಮಂದಿ ಇದ್ದು, ಉಳಿದ 23 ಮಂದಿಯೂ ಜಿಲ್ಲೆಯಲ್ಲಿ ಈಗಾಗಲೇ ಪಾಸಿಟಿವ್ ಬಂದವರ ಸ್ಥಳೀಯ ಪ್ರಾಥಮಿಕ ಸಂಪರ್ಕಿತ ರಾಗಿದ್ದಾರೆ ಎಂದು ಡಾ.ಸೂಡ ವಿವರಿಸಿದರು.

ಸೋಂಕಿತರಲ್ಲಿ ಉಡುಪಿ ತಾಲೂಕಿನ 16 ಮಂದಿ, ಕುಂದಾಪುರ ತಾಲೂಕಿನ 23 ಮಂದಿ ಹಾಗೂ ಕಾರ್ಕಳ ತಾಲೂಕಿನ ಒಬ್ಬರು ಸೇರಿದ್ದಾರೆ. 21 ಮಂದಿ ಪುರುಷರು, 16 ಮಹಿಳೆಯರು ಅಲ್ಲದೇ ಎರಡು ಗಂಡು ಹಾಗೂ ಒಬ್ಬ ಹೆಣ್ಣು ಸೇರಿ ಮೂವರು ಮಕ್ಕಳು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ.

ಮಣಿಪಾಲದ ವೈದ್ಯರಿಗೆ ಸೋಂಕು: ಇಂದು ಪಾಸಿಟಿವ್ ಬಂದವರಲ್ಲಿ ಮಣಿಪಾಲದ ಒಬ್ಬ ವೈದ್ಯರು, ಕುಂದಾಪುರದ ವೈದ್ಯರ ತಾಯಿ, ಕುಂದಾಪುರ ಕೆಎಸ್ಸಾರ್ಟಿಸಿಯ ಮೂವರು ಚಾಲಕರು, ಈಗಾಗಲೇ ಪಾಸಿಟಿವ್ ಬಂದಿರುವ ಕೋಟದ ಹೊಟೇಲ್‌ನ ಮಾಲಕರ ಮನೆಯವರು, ಅಟೋರಿಕ್ಷಾ ಚಾಲಕರು ಸೇರಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು.

ಅಲ್ಲದೇ ಬೈಂದೂರು ತಾಲೂಕು ಉಪ್ಪುಂದದ ಒಬ್ಬರು, ಸಿದ್ಧಾಪುರ ಹೆನ್ನಬೈಲಿನ ಒಬ್ಬರು ಹಾಗೂ ಕೆದೂರಿನ ಒಬ್ಬರಿಗೆ ಇಂದು ಪಾಸಿಟಿವ್ ಬಂದಿದ್ದು, ಅವರನ್ನು ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಸೋಮವಾರ 40 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 1362ಕ್ಕೇರಿದೆ. ಇದರಿಂದ ಉಡುಪಿ ಜಿಲ್ಲೆ ಈಗಲೂ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು (10561) ಹಾಗೂ ಕಲಬುರಗಿ ಜಿಲ್ಲೆ (1699) ಮೊದಲೆರಡು ಸ್ಥಾನದಲ್ಲಿವೆ. ಬಳ್ಳಾರಿ (1343) ಹಾಗೂ ದಕ್ಷಿಣ ಕನ್ನಡ (1276) ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದರೆ, ಯಾದಗಿರಿ 1006 ಪ್ರಕರಣಗಳೊಂದಿಗೆ ಆರನೇ ಸ್ಥಾನದಲ್ಲಿದೆ.

18 ಮಂದಿ ಗುಣಮುಖ: ಜಿಲ್ಲೆಯಲ್ಲಿ ಪಾಸಿಟಿವ್ ಬಂದು ಚಿಕಿತ್ಸೆಯ ಬಳಿಕ ಗುಣಮುಖರಾದ 18 ಮಂದಿ ಇಂದು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಉಡುಪಿಯ ಒಬ್ಬರು, ಕಾರ್ಕಳದ 14 ಹಾಗೂ ಕುಂದಾಪುರದ ಮೂವರು ಆಸ್ಪತ್ರೆಯಿಂದ ಬಿಡುಗಡೆಗೊಂಡವರಲ್ಲಿ ಸೇರಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 1154ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 205 ಮಂದಿ ಜಿಲ್ಲೆಯಲ್ಲಿ ಇನ್ನೂ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ.

ಸೋಂಕಿನ ಪರೀಕ್ಷೆಗಾಗಿ ಸೋಮವಾರ ಇನ್ನೂ 718 ಮಂದಿಯ ಗಂಟಲು ದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 65 ಮಂದಿ, ಕೋವಿಡ್ ಸಂಪರ್ಕಿತರು 40 ಮಂದಿ, ಉಸಿರಾಟ ತೊಂದರೆಯ ಮೂವರು, ಶೀತಜ್ವರದಿಂದ ಬಳಲುವ ಏಳು ಮಂದಿ ಹಾಗೂ ದೇಶದ ವಿವಿದೆಡೆಗಳ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದ 603 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.

ಇಂದು ಪಡೆದ 718 ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿ ಸಿದ ಮಾದರಿಗಳ ಒಟ್ಟು ಸಂಖ್ಯೆ 18,542ಕ್ಕೇರಿದೆ. ಇವುಗಳಲ್ಲಿ ಈವರೆಗೆ 15,540 ನೆಗೆಟಿವ್, 1362 ಪಾಸಿಟಿವ್ ಬಂದಿವೆ. ಮೂವರು ಮೃತಪಟ್ಟಿದ್ದಾರೆ. ಇನ್ನು ಒಟ್ಟು 1640 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ. ಇಂದು 13 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ಒಬ್ಬರು ಕೋವಿಡ್ ಶಂಕಿತರು, ಏಳು ಮಂದಿ ಉಸಿರಾಟ ತೊಂದರೆಯವರು ಹಾಗೂ ಐವರು ಶೀತಜ್ವರದಿಂದ ಬಳಲುವವರು ಸೇರಿದ್ದಾರೆ ಎಂದರು.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗಳಿಂದ ಇಂದು 18 ಮಂದಿ ಬಿಡುಗಡೆಗೊಂಡಿದ್ದು, 122 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಕೊರೋನ ಸೋಂಕಿನ ಗುಣಲಕ್ಷಣದ 49 ಮಂದಿ ಸೇರಿದಂತೆ ಒಟ್ಟು 6001 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 1126 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸೂಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News