ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಎಲ್ಲಾ ಕೋವಿಡ್ ರೋಗಿಗಳಿಗೆ ಚಿಕಿತ್ಸೆ

Update: 2020-07-06 16:31 GMT

ಉಡುಪಿ, ಜು.6:ಜಿಲ್ಲೆಯಲ್ಲಿ ಕೋವಿಡ್-19ರ ರೋಗಿಗಳ ಚಿಕಿತ್ಸೆಗಾಗಿಯೇ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕಳೆದ ಎ.1ರಿಂದ ಕಾರ್ಯಾಚರಿಸುತಿದ್ದ ಮಣಿಪಾಲ ಮಾಹೆಯ ಆಡಳಿತಕ್ಕೊಳಪಟ್ಟ ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆ, ಜು.1ರಿಂದ ಎಲ್ಲಾ ಕೋವಿಡ್ ರೋಗಿಗಳಿಗೆ ಮುಕ್ತ ವಾಗಿ ಚಿಕಿತ್ಸೆಗೆ ಲಭ್ಯವಿದೆ ಎಂದು ಮಣಿಪಾಲ ಕೆಎಂಸಿಯ ವೈದ್ಯಕೀಯ ಅಧೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ.ಟಿಎಂಎ ಪೈ ಆಸ್ಪತ್ರೆಯನ್ನು ಉನ್ನತ ದರ್ಜೆಗೇರಿಸಿ, ಜಿಲ್ಲೆಯ ಕೋವಿಡ್-19 ರೋಗಿಗಳಿಗೆ ಉತ್ತಮವಾದ ತೀವ್ರ ನಿಗಾ ಘಟಕದ ಸವಲತ್ತು ಮತ್ತು ಆಮ್ಲಜನಕದ ಸಹಾಯವುಳ್ಳ ಹಾಸಿಗೆಗಳಿಗೆ ಹೆಚ್ಚಿನ ಗಮನವನ್ನು ನೀಡಿ ಕಳೆದ ಎ.1ರಿಂದ ಕೋವಿಡ್ ಚಿಕಿತ್ಸೆಗಾಗಿಯೇ ಮೀಸಲಿರಿಸಲಾಗಿತ್ತು. ಜಾಗತಿಕ ಸಾಂಕ್ರಾಮಿಕ ರೋಗದ ಈ ಸಮಯದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ವಿಶಿಷ್ಟ ಮಾದರಿಯಾಗಿ ಈ ಪ್ರಯೋಗ ಯಶಸ್ವಿಯಾಗಿದ್ದು, ಜನಮನ್ನಣೆಯನ್ನು ಪಡೆದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

202 ಮಂದಿಗೆ ಚಿಕಿತ್ಸೆ:  ಎ.1ರಿಂದ ಜೂ.30ರವರೆಗೆ ಡಾ.ಟಿಎಂಎ ಪೈ ಆಸ್ಪತ್ರೆ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಇಲ್ಲಿ 202 ಮಂದಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಈಗಾಗಲೇ 147 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾದ ಎಲ್ಲಾ ರೋಗಿ ಗಳಿಗೆ ಆಸ್ಪತ್ರೆಯು ಜನರಲ್ ವಾರ್ಡಿನಲ್ಲಿ, ಅವಶ್ಯವಿರುವ ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ, ವೆಂಟಿಲೇಟರ್, ರಕ್ಷಕ ಸಾಧನಗಳು ಮತ್ತು ಡಯಾಲಿಸಿಸ್ ಸೌಲಭ್ಯಗಳ ಸಹಿತ ಸಂಪೂರ್ಣ ಉಚಿತವಾದ ಚಿಕಿತ್ಸೆಯನ್ನು ನೀಡಿದೆ.

ಮಾಹೆ ಮಣಿಪಾಲ ಈವರೆಗೆ ಒಟ್ಟು 75 ಲಕ್ಷ ರೂ.ಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆಂದು ಭರಿಸಿದೆ. ಸುಮಾರು 15 ಲಕ್ಷ ರೂ.ವನ್ನು ಪೌಷ್ಟಿಕ ಆಹಾರಕ್ಕೆ ವ್ಯಯಿಸಲಾಗಿದೆ. ಇದಲ್ಲದೇ ಆಸ್ಪತ್ರೆಯು ಸುಮಾರು 50 ಲಕ್ಷ ರೂ. ಆಸ್ಪತ್ರೆಯ ಸೇವಾ ಸೌಲಭ್ಯಗಳ ಮೇಲ್ದರ್ಜೆಗೇರಿಸಲು ಖರ್ಚು ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.

ಸರಕಾರಿ ಸೌಲಭ್ಯ ಲಭ್ಯ: ಇದೇ ಜು.1ರಿಂದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯು ಆಸ್ಪತ್ರೆಯಲ್ಲಿ ಕೋವಿಡ್-19 ಚಿಕಿತ್ಸೆಗೆ ಜನರಲ್ ವಾರ್ಡಿನಲ್ಲಿ ಲಭ್ಯವಿದೆ. ಈ ವ್ಯವಸ್ಥೆಯನ್ನು ರಾಜ್ಯ ಸರಕಾರದ ಜೂ.23ರ ಆದೇಶದಲ್ಲಿ ಉಲ್ಲೇಖಿಸಿರುವ ರೀತಿಯಲ್ಲಿ ಕಾರ್ಯಗತ ಮಾಡಲಾ ಗುತ್ತಿದೆ. ರೋಗಿಗಳಿಗೆ ಸ್ಪೆಶಲ್ ವಾರ್ಡ್ ಬೇಕಾದಲ್ಲಿ ಈ ಯೋಜನೆ ಲಭ್ಯವಾಗದಿದ್ದರೂ ರಾಜ್ಯ ಸರಕಾರದ ಆದೇಶದಲ್ಲಿ ಉಲ್ಲೇಖಿಸಿರುವ ಮೊತ್ತವನ್ನು ಮಾತ್ರ ಪಾವತಿಸಿ ಪಡೆಯಬಹುದಾಗಿದೆ ಎಂದೂ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News