ಕಾಸರಗೋಡಿನಿಂದ ಮಂಗಳೂರಿಗೆ ಆಗಮಿಸುವವರ ಪಾಸ್ ತಾತ್ಕಾಲಿಕ ರದ್ದು

Update: 2020-07-06 17:21 GMT

ಕಾಸರಗೋಡು, ಜು.6: ಜಿಲ್ಲೆಯಿಂದ ಮಂಗಳೂರಿಗೆ ಪಾಸ್ ಮೂಲಕ ದಿನಂಪ್ರತಿ ತೆರಳುವವವರ ದೈನಂದಿನ ಪಾಸ್ ಅನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜನಪ್ರತಿನಿಧಿಗಳ ತುರ್ತು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಜಿಲ್ಲೆಯಲ್ಲಿ ಕೊರೋನ ಸಮುದಾಯಕ್ಕೆ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮಂಗಳೂರಿಗೆ ಉದ್ಯೋಗಕ್ಕೆ ತೆರಳುವವರು ಅಲ್ಲೇ ವಾಸ್ತವ್ಯ ಹೂಡಬೇಕು. ಕಾಸರಗೋಡಿನಿಂದ ಮಂಗಳೂರು, ಮಂಗಳೂರಿನಿಂದ ಕಾಸರಗೋಡಿಗೆ ಡೈಲಿ ಪಾಸ್‌ನಲ್ಲಿ ಬರುವವರಿಗೆ 28 ದಿನಗಳ ಕಾಲ ಉದ್ಯೋಗದ ಸ್ಥಳದಲ್ಲೇ ತಂಗಬೇಕು. ಇದು ವೈದ್ಯರ ಸಹಿತ ಆರೋಗ್ಯ ಕಾರ್ಯಕರ್ತರಿಗೂ ಅನ್ವಯವಾಗಿದೆ.

ಕೇರಳ-ಕರ್ನಾಟಕ ಸಂಪರ್ಕ ರಸ್ತೆಯಲ್ಲಿ ಎಲ್ಲ ರೀತಿಯ ನಿಗಾ ಇರಿಸಲಾಗುವುದು. ಗಡಿ ರಸ್ತೆಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಬ್ಯಾರಿಕೇಡ್‌ಗಳನ್ನು ಇರಿಸಲಾಗುವುದು. ಮೂವರು ಸಿಬ್ಬಂದಿಯನ್ನು ನೇಮಿಸಲಾಗುವುದು. ಗ್ರಾಮ ಪಂಚಾಯತ್, ಜಿಲ್ಲಾಡಳಿತ, ಪೊಲೀಸರು ನಿರ್ಧರಿಸುವ ರಸ್ತೆಗಳಲ್ಲಿ ಮಾತ್ರ ಸಂಚಾರಕ್ಕೆ ಅನುಮತಿ ಲಭಿಸಲಿದ್ದು, ಸಂಚಾರಕ್ಕೆ ಅನುಮತಿ ನೀಡುವ ರಸ್ತೆಗಳಲ್ಲಿ ಪೊಲೀಸರು ವಿಶೇಷ ನಿಗಾ ಇರಿಸಲಿದೆ. ಉಭಯ ರಾಜ್ಯಗಳ ಗಡಿ ಪ್ರದೇಶದಲ್ಲಿ ವಾಸಿಸುವವರು ಅನಿವಾರ್ಯವಾಗಿ ನಡೆದುಕೊಂಡು ತೆರಳಬೇಕಾಗಿ ಬಂದಲ್ಲಿ ಅವರ ಆಧಾರ್ ಕಾರ್ಡ್ ಸಹಿತ ದಾಖಲೆ ಪತ್ರಗಳ ತಪಾಸಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಸಮೀಪದ ಗ್ರಾಪಂಗಳೊಂದಿಗೆ ಮಾತುಕತೆ ನಡೆಸಿ ತೀರ್ಮಾನಕ್ಕೆ ಬರುವಂತೆ ಮಂಜೇಶ್ವರ ಬ್ಲಾಕ್ ಪಂಚಾಯತ್ ಸಭೆ ಆದೇಶಿಸಿತ್ತು.

ಜಿಲ್ಲೆಯ ಸದ್ಯದ ಸ್ಥಿತಿಗತಿಗಳ ಕುರಿತು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಮಾಹಿತಿ ನೀಡಿದರು.

ಜಿಲ್ಲೆಯ ಕೆಲವೆಡೆ ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಗುಂಪುಗೂಡುತ್ತಿರುವುದು ಗಮನಕ್ಕೆ ಬಂದಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಭೆ ಪೊಲೀಸರಿಗೆ ಆದೇಶ ನೀಡಿದೆ. ಮಾಸ್ಕ್ ಧರಿಸದಿರುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಇರುವುದು, ಸಾಬೂನು, ಸ್ಯಾನಿಟೈಸರ್ ಇತ್ಯಾದಿ ಬಳಸಿ ಕೈತೊಳೆಯದಿರುವುದು ಇತ್ಯಾದಿ ಬಗ್ಗೆ ಮಾಹಿತಿ ಲಭಿಸಿದೆ. ಈ ಸಂಬಂಧ ಕಾೂನು ಕ್ರಮಗಳು ಜಾರಿಗೊಳ್ಳಲಿವೆ.

10 ಮಂದಿಗಿಂತ ಅಧಿಕ ಸಲ್ಲದು: ಪ್ರತಿಭಟನೆ ಸಹಿತ ಕಾರ್ಯಕ್ರಮಗಳಲ್ಲಿ 10 ಮಂದಿಗಿಂತ ಅಧಿಕ ಜನ ಸೇರಕೂಡದು. ಇಲ್ಲಿ ಭಾಗವಹಿಸುವವರು ಮಾಸ್ಕ್ ಧರಿಸುವುದು ಸಹಿತ ಆರೋಗ್ಯ ಇಲಾಖೆ ತಿಳಿಸಿರುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಇತರ ರಾಜ್ಯಗಳಿಂದ ಮೀನು, ತರಕಾರಿ ಇತ್ಯಾದಿ ಹೇರಿಕೊಂಡು ಬರುವ ಲಾರಿಗಳ ಚಾಲಕರಿಗೆ ಹೊಟೇಲ್‌ಗಳಲ್ಲಿ ಆಹಾರ ಪಾರ್ಸೆಲ್ ರೂಪದಲ್ಲಿ ಮಾತ್ರ ನೀಡಬೇಕು. ರೋಗ ಹೆಚ್ಚಳ ಹಿನ್ನೆಲೆಯಲ್ಲಿ ಮಂಜೇಶ್ವರ ವಲಯದಲ್ಲಿ ಲಾರಿಗಳನ್ನು ಪಾರ್ಕಿಂಗ್ ಮಾಡಬಾರದು. ಹೊಟೇಲ್‌ಗಳ ಬಳಿ ಲಾರಿಗಳನ್ನು ಸಾಮೂಹಿಕವಾಗಿ ನಿಲುಗಡೆ ನಡೆಸಕೂಡದು. ಈ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹೊಣೆ ನೀಡಲಾಗಿದೆ.

ಡಯಾಲಿಸಿಸ್ ಯಂತ್ರಗಳ ಖರೀದಿಗೆ ತುರ್ತು ಕ್ರಮ:

ಕಾಸರಗೋಡು ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ಸಂಸದ, ಶಾಸಕರ ನಿಧಿ ಬಳಸಿ ಡಯಾಲಿಸಿಸ್ ಯಂತ್ರಗಳನ್ನು ತುರ್ತಾಗಿ ಖರೀದಿಸಲು ಜಿಲ್ಲಾಡಳಿತ ಮಂಜೂರಾತಿ ನೀಡಿದ್ದರೂ, ಇವನ್ನು ಒದಗಿಸಲು ಕೇರಳ ಮೆಡಿಕಲ್ ನಿಗಮ ವಿಳಂಬ ನಡೆಸುತ್ತಿರುವ ಹಿನ್ನೆಲೆಯಲ್ಲಿ ಟೆಂಡರ್ ಕ್ರಮಗಳ ಮೂಲಕ ಸ್ಥಳೀಯ ಮಟ್ಟದಲ್ಲಿ ಖರೀದಿ ನಡೆಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ತುರ್ತು ಅನುಮತಿ ನೀಡಬೇಕು ಎಂಬ ಜಿಲ್ಲಾಡಳಿತದ ಬಯಕೆಯನ್ನು ಆರೋಗ್ಯ ಇಲಾಖೆಯ ಗಮನಕ್ಕೆ ತರಲಾಗಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.

ಕ್ರೀಡೆ ಇತ್ಯಾದಿ ಕಡೆಗಳಲ್ಲಿ ಆರೋಗ್ಯ ಇಲಾಖೆಯ ಕಟ್ಟುನಿಟ್ಟುಗಳನ್ನು ಕಡ್ಡಾಯಗೊಳಿಸಲು ಸಭೆ ತೀರ್ಮಾನಿಸಿದೆ.

ಸಭೆಯಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎಂ.ಸಿ.ಕಮರುದ್ದೀನ್, ಎನ್.ಎ.ನೆಲ್ಲಿಕುನ್ನು, ಕೆ.ಕುಂಞಿರಾಮನ್, ಎಂ.ರಾಜಗೋಪಾಲನ್, ಜಿಪಂ ಅಧ್ಯಕ್ಷ ಎ.ಜಿ.ಸಿ.ಬಶೀರ್, ಬ್ಲಾಕ್ ಪಂಚಾಯತ್, ನಗರಸಭೆ, ಮಂಜೇಶ್ವರ ಬ್ಲಾಕ್ ಪಂಚಾಯತ್ ವ್ಯಾಪ್ತಿಯ ಗ್ರಾಪಂಗಳ ಅಧ್ಯಕ್ಷರು, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್ ಮತ್ತಿತರು ಉಪಸ್ಥಿತರಿದ್ದರು.

ಇತರ ರಾಜ್ಯಗಳ ಕಾರ್ಮಿಕರ ಹೊಣೆಗಾರಿಕೆ ಗುತ್ತಿಗೆದಾರರಿಗೆ ಇತರ ರಾಜ್ಯಗಳ ಕಾರ್ಮಿಕರು ರಾಜ್ಯ ಸರಕಾರದ ಕೋವಿಡ್ 19 ಜಾಗ್ರತಾ ಪೋರ್ಟಲ್‌ನಲ್ಲಿ ನೋಂದಣಿ ನಡೆಸಿ ಕಾಸರಗೋಡು ಜಿಲ್ಲೆಗೆ ಆಗಮಿಸಬೇಕು. ಇವರ ಪೂರ್ಣ ಹೊಣೆಗಾರಿಗೆ ಗುತ್ತಿಗೆದಾರರು ವಹಿಸಿಕೊಳ್ಳಬೇಕು. ಕಾರ್ಮಿಕರಿಗೆ ಬೇಕಾದ ಸೌಲಭ್ಯಗಳನ್ನು ಅವರು ಒದಗಿಸಬೇಕು. ಕಾರ್ಮಿಕರಿಗೆ ಪ್ರತಿಕೂಲ ಪರಿಸ್ಥಿತಿ ಒದಗಿದರೆ ಆಯಾ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆ ಎಚ್ಚರಿಕೆ ನೀಡಿದೆ.

ಇತರ ರಾಜ್ಯಗಳು, ವಿದೇಶಗಳಿಂದ ಊರಿಗೆ ಮರಳುವವರು ರಾಜ್ಯ ಸರಕಾರದ ಕೋವಿಡ್ 19 ಜಾಗ್ರತಾ ಪೋರ್ಟಲ್‌ನಲ್ಲಿ ನೋಂದಣಿ ನಡೆಸಿ ಜಿಲ್ಲೆಗೆ ಆಗಮಿಸಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿದೆ.

31 ವರೆಗೆ ಬೇಕಲಕೋಟೆ ಬಂದ್

ಬೇಕಲಕೋಟೆ ಸಹಿತ ಕಾಸರಗೋಡು ಜಿಲ್ಲೆಯ ಪ್ರವಾಸಿತಾಣಗಳನ್ನು ಜುಲೈ 31 ವರೆಗೆ ತೆರೆಯಕೂಡದು ಎಂದು ಜನಪ್ರತಿನಿಧಿಗಳ ಸಭೆ ನಿರ್ಧರಿಸಿದೆ. ರಾಣಿಪುರಂ, ಪೊಸಡಿಗುಂಪೆ ಸಹಿತ ತಾಣಗಳಲ್ಲಿ ಅಕ್ರಮವಾಗಿ ಜನ ಗುಂಪು ಸೇರುತ್ತಿರುವುದಾಗಿ ಸಭೆಯಲ್ಲಿ ಜನಪ್ರತಿನಿಧಿಗಳು ತಿಳಿಸಿದರು. ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಭೆ ಪೊಲೀಸರಿಗೆ ಆದೇಶ ನೀಡಿದೆ.

ನಗರ ಪ್ರದೇಶಗಳಲ್ಲಿ ರಸ್ತೆಬದಿಯ ಜ್ಯೂಸ್ ಅಂಗಡಿಗಳು ಇತ್ಯಾದಿ ಕಡೆ ಜನ ಅನಗತ್ಯವಾಗಿ ಗುಂಪುಸೇರುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಸೊಂಕು ಹೆಚ್ಚಳವಾಗುವ ಭೀತಿಯಿದೆ. ಇಂಥವುಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಸಭೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News