ಕೊರೋನ ವರದಿ ಬರುವುದಕ್ಕಿಂತ ಮೊದಲು ಜಿಲ್ಲೆಗೆ ಹೊರರಾಜ್ಯಗಳಿಂದ ಆಗಮಿಸಿದರೆ ಕ್ರಿಮಿನಲ್ ಮೊಕದ್ದಮೆ

Update: 2020-07-06 17:36 GMT

ಉಡುಪಿ, ಜು.6: ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವ ಸಾರ್ವಜನಿಕರು, ಖಾಸಗಿ ಲ್ಯಾಬ್‌ಗಳಲ್ಲಿ ನೀಡಿರುವ ತಮ್ಮ ಕೋವಿಡ್-19 ಪರೀಕ್ಷಾ ವರದಿ ಬರುವ ಮುನ್ನವೇ ಜಿಲ್ಲೆಗೆ ಆಗಮಿಸುತ್ತಿದ್ದು, ಜಿಲ್ಲೆಗೆ ಆಗಮಿಸಿದ ನಂತರ ಅವರ ವರದಿಯು ಪಾಸಿಟಿವ್ ಆಗಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಲ್ಲಿ, ಅಂತಹ ವ್ಯಕ್ತಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಹೊರರಾಜ್ಯದಿಂದ ಬರುವ ವ್ಯಕ್ತಿಗಳು ತಮ್ಮ ಕೋವಿಡ್ 19 ಪರೀಕ್ಷಾ ವರದಿ ಬಂದ ನಂತರವೇ ಜಿಲ್ಲೆಗೆ ಬರಬೇಕು. ಖಾಸಗಿ ಲ್ಯಾಬ್‌ಗಳೂ ಸಹ ಅಂತಹ ವ್ಯಕ್ತಿಗಳ ವರದಿಯನ್ನು ಸಂಬಂದಪಟ್ಟ ಜಿಲ್ಲಾಡಳಿತಕ್ಕೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಜಿಲ್ಲೆಯ ಬಸ್‌ಗಳಲ್ಲಿ ಸುರಕ್ಷಿತ ಅಂತರ ಪಾಲನೆಯಾಗದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಬಸ್‌ಗಳ ವಿರುದ್ದ ಪ್ರಕರಣ ದಾಖಲಿಸದ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ನೋಟೀಸು ಜಾರಿಗೊಳಿಸುವಂತೆ ಸೂಚಿಸಿದರು.

ಎಲ್ಲಾ ತಹಶೀಲ್ದಾರ್‌ಗಳು ಬಸ್‌ಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿನ ಪ್ರಯಾಣಿಕರಿದ್ದಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್‌ನ ಚಾಲಕ ಮತ್ತು ಕಂಡಕ್ಟರ್ ವಿರುದ್ದ ಪ್ರಕರಣ ದಾಖಲಿಸುವಂತೆ ಹಾಗೂ ಹೆಚ್ಚುವರಿ ಪ್ರಯಾಣಿಕರಿಗೆ ಆರ್‌ಟಿಓ ಮೂಲಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯ ಎಲ್ಲಾ ಖಾಸಗಿ ಬಸ್ ಮಾಲಕರಿಗೆ ಮತ್ತು ಆರ್.ಟಿ.ಓ ಅಧಿಕಾರಿಗಳಿಗೆ ಈ ಹಿಂದೆಯೇ ಸಭೆ ನಡೆಸಿ ಬಸ್‌ಗಳಲ್ಲಿ ಸುರಕ್ಷಿತ ಅಂತರ ಪಾಲನೆಗೆ ಸೂಚನೆ ನೀಡಿದ್ದರೂ ಸಹ ಇನ್ನೂ ಇದರ ಉಲ್ಲಂಘನೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News