ಉಡುಪಿ: ಸಿಬ್ಬಂದಿಗೆ ಕೊರೋನ; ಕೊರಿಯರ್ ಕಚೇರಿ ಸೀಲ್‌ಡೌನ್

Update: 2020-07-06 17:57 GMT

ಉಡುಪಿ, ಜು.6: ಸಿಬ್ಬಂದಿಯೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ನಗರದ ಕಿನ್ನಿಮುಲ್ಕಿಯ ಕೊರಿಯರ್ ಸರ್ವಿಸ್ ಕಂಪೆನಿಯ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ.

ಎರಡು ದಿನಗಳ ಹಿಂದೆ ಇವರು ಕೊರೋನ ಪರೀಕ್ಷೆ ಮಾಡಿಸಿದ್ದು, ಇದೀಗ ಇವರ ವರದಿ ಕೊರೋನ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಇವರ ಕಚೇರಿ ಮತ್ತು ಉಪ್ಪೂರಿನಲ್ಲಿರುವ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಎರಡು ಬಾರಿ ಸ್ಯಾನಿಟೈಸ್ ಮಾಡಿ, 48 ಗಂಟೆಗಳ ಬಳಿಕ ಕಚೇರಿಯನ್ನು ಪುನಾರಂಭಿಸಬಹುದಾಗಿದೆ. ಇವರನ್ನು ಮನೆ ಮತ್ತು ಕಚೇರಿಯಲ್ಲಿ ಪ್ರಾಥಮಿಕ ಸಂಪರ್ಕ ಮಾಡಿದವರಿಗೆ ಕ್ವಾರಂಟೇನ್ ವಿಧಿಸಲಾಗಿದೆ.

ಕೆಎಸ್ಸಾರ್ಟಿಸಿಯ 3 ಚಾಲಕರಿಗೆ ಪಾಸಿಟಿವ್: ಕುಂದಾಪುರದ ಕೆಎಸ್ಸಾರ್ಟಿಸಿ ಬಸ್‌ಗಳ ಮೂವರು ಚಾಲಕರು-ನಿರ್ವಾಹಕರಲ್ಲಿ ಕೋವಿಡ್-19ರ ಪಾಸಿಟಿವ್ ಕಂಡು ಬಂದಿದೆ. ಮೂವರು ಸಹ ಕುಂದಾಪುರ ಡಿಪೋದ ಚಾಲಕರಾಗಿದ್ದು, ಹೊಸ ಜಿಲ್ಲೆಗಳಿಗೆ ಸಂಚರಿಸುವ ಬಸ್‌ಗಳ ಚಾಲಕರಾಗಿದ್ದಾರೆ.

ಕಳೆದ ಗುರುವಾರ ಕುಂದಾಪುರ ಡಿಪೋದ ಸಿಬ್ಬಂದಿಗಳು, ಚಾಲಕರು, ನಿರ್ವಾಹಕರಿಗೆ ಕೋವಿಡ್-19 ಪರೀಕ್ಷೆ ನಡೆಸಿದ್ದು, ಅವರ ಗಂಟಲುದ್ರವ ಮಾದರಿಗಳನ್ನು ಪರೀಕ್ಷೆಗೆ ಪಡೆಯಲಾಗಿತ್ತು. ಅವುಗಳಲ್ಲಿ ಮೂವರಿಗೆ ಸೋಂಕು ಇರುವುದು ಸೋಮವಾರ ಪತ್ತೆಯಾಗಿದೆ.

ಬಾಗಲಕೋಟೆ ಮೂಲದ 36ರ ಹರೆಯರ, ಬಸ್ರೂರಿನ 58ರ ಹರೆಯದ ಹಾಗೂ 44 ವರ್ಷ ಪ್ರಾಯದ ಚಾಲಕರಲ್ಲಿ ಸೋಂಕು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಇವರಲ್ಲಿ 44ರ ಹರೆಯದ ವ್ಯಕ್ತಿ ಕುಂದಾಪುರ ಬೆಂಗಳೂರು, 36ರ ಹರೆಯದ ವ್ಯಕ್ತಿ ಕುಂದಾಪುರ- ಶಿವಮೊಗ್ಗ ಬಸ್‌ಗಳ ಚಾಲಕರಾಗಿದ್ದು ಸದ್ಯ ರಜೆಯಲ್ಲಿ ಬಾಗಲಕೋಟೆಯಲ್ಲಿದ್ದಾರೆ. ಅವರಿಗೆ ಅಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ರೂರಿನ 58ರ ಹರೆಯದ ಚಾಲಕ ರಜೆಯಲ್ಲಿದ್ದು, ಲಾಕ್‌ಡೌನ್ ಬಳಿಕ ಕರ್ತವ್ಯಕ್ಕೆ ಹಾಜರಾಗಿಲ್ಲ.
ಈ ಮೂವರ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿ ಕ್ವಾರಂಟೈನ್‌ಗೆ ಒಳಪಡಿಸುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News