ಮಂಗಳೂರು ವಿವಿ ಕ್ಯಾಂಪಸ್‌ನ ಪ್ರಥಮ ದರ್ಜೆ ಕಾಲೇಜು ಮುಚ್ಚದಂತೆ ಸಿಎಫ್‌ಐ ಒತ್ತಾಯ

Update: 2020-07-06 18:05 GMT

ಮಂಗಳೂರು,ಜು.6: ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ 2017ರಲ್ಲಿ ಸ್ಥಾಪನೆಗೊಂಡ ಪ್ರಥಮ ದರ್ಜೆ ಕಾಲೇಜನ್ನು ಆರ್ಥಿಕ ಸಮಸ್ಯೆಯ ಕಾರಣವಿಟ್ಟು ಮುಚ್ಚಲು ಹೊರಟಿರುವ ಮಂಗಳೂರು ವಿವಿಯ ಕ್ರಮವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿಯು ಖಂಡಿಸಿದೆ. ಅಲ್ಲದೆ ಈ ಕಾಲೇಜನ್ನು ಮುಚ್ಚದಂತೆ ಒತ್ತಾಯಿಸಿ ಜಿಲ್ಲಾ ನಿಯೋಗವು ವಿವಿಯ ಕುಲಪತಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

 ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೈಗೆಟಕುವ ದರದಲ್ಲಿ ಉತ್ತಮ ಶಿಕ್ಷಣ ದೊರಕಬೇಕು ಎಂಬ ಉದ್ದೇಶದಿಂದ ಸ್ಥಾಪನೆಗೊಂಡಿರುವ ಈ ಕಾಲೇಜಿನಲ್ಲಿ ಹಲವು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಈ ಕಾಲೇಜಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ವಿವಿ ಕ್ಯಾಂಪಸ್‌ನಲ್ಲೇ ಉನ್ನತ ಶಿಕ್ಷಣ ಕೂಡ ಪಡೆಯುವ ಅವಕಾಶವಿದೆ. ಇದೀಗ ಕ್ಷುಲ್ಲಕ ಕಾರಣ ಹೇಳಿ ಈ ಕ್ಯಾಂಪಸ್ಸನ್ನು ಮುಚ್ಚಲು ಹೊರಟಿರವುದು ಆಕ್ಷೇಪಾರ್ಹ ಎಂದು ನಿಯೋಗವು ತಿಳಿಸಿತು.

ಇದೀಗ ದಾಖಾಲಾತಿಯನ್ನು ಕೂಡ ನಿಲ್ಲಿಸಿದ್ದು, ಪ್ರಸ್ತುತ ವಿದ್ಯಾಭ್ಯಾಸ ಪಡೆಯತ್ತಿರುವ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ಅರ್ಧದಲ್ಲಿ ಕೈ ಬಿಡದೆ ವಿವಿಯು ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದೆ.

ನಿಯೋಗದಲ್ಲಿ ಸಿಎಫ್‌ಐ ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿಜೆ, ಮಂಗಳೂರು ಜಿಲ್ಲಾಧ್ಯಕ್ಷ ಹಸನ್ ಸಿರಾಜ್, ವಿವಿ ಘಟಕದ ಅಧ್ಯಕ್ಷ ಸಲ್ಮಾನ್ ಫಾರಿಶ್, ಸದಸ್ಯರಾದ ಮುಹಮ್ಮದ್ ಉವೈಸ್, ಮುಹಮ್ಮದ್ ಅಶಾಮ್, ನೌಫಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News