ಚೀನಾದ ಆ್ಯಪ್‌ಗಳನ್ನು ನಿಷೇಧಿಸಲು ಅಮೆರಿಕ ಚಿಂತನೆ

Update: 2020-07-07 15:53 GMT

ವಾಶಿಂಗ್ಟನ್, ಜು. 7: ಟಿಕ್ ಟಾಕ್ ಸೇರಿದಂತೆ ಚೀನಾದ ಸಾಮಾಜಿಕ ಮಾಧ್ಯಮ ಆ್ಯಪ್ ಗಳನ್ನು ನಿಷೇಧಿಸುವ ಬಗ್ಗೆ ಅಮೆರಿಕ ಖಂಡಿತವಾಗಿಯೂ ಪರಿಶೀಲಿಸುತ್ತಿದೆ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಸೋಮವಾರ ಹೇಳಿದ್ದಾರೆ.

‘‘ಈ ವಿಷಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಮುಂಚಿತವಾಗಿ ನಾನು ಏನೂ ಹೇಳುವುದಿಲ್ಲ. ಆದರೆ ಇದರ ಬಗ್ಗೆ ನಾವು ಪರಿಶೀಲನೆ ನಡೆಸಿದ್ದೇವೆ ಎಂದು ಮಾತ್ರ ಹೇಳಬಲ್ಲೆ’’ ಎಂದು ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ಪಾಂಪಿಯೊ ಹೇಳಿದರು.

ಟಿಕ್ ಟಾಕ್ ತನ್ನ ಬಳಕೆದಾರರ ಮಾಹಿತಿಗಳನ್ನು ನಿಭಾಯಿಸುತ್ತಿರುವ ವಿಧಾನದ ಬಗ್ಗೆ ಅಮೆರಿಕದ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ ಹಾಗೂ ಅದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿದೆ ಎಂಬುದಾಗಿ ಬಣ್ಣಿಸಿದ್ದಾರೆ. ಚೀನಾ ಕಮ್ಯುನಿಸ್ಟ್ ಪಕ್ಷದ ನಿಯಂತ್ರಣದಲ್ಲಿರುವ ಗುಪ್ತಚರ ದಳದೊಂದಿಗೆ ಚೀನಾದ ಕಂಪೆನಿಗಳು ಸಹಕರಿಸುವುದು ಹಾಗೂ ಅದಕ್ಕೆ ಬೆಂಬಲ ನೀಡುವುದನ್ನು ಕಡ್ಡಾಯವಾಗಿಸುವ ಚೀನಾದ ಕಾನೂನುಗಳ ಬಗ್ಗೆ ನಾವು ಕಳವಳಗೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.

ಚೀನಾದ ಬೈಟ್ಡಾನ್ಸ್ ಕಂಪೆನಿಯ ಒಡೆತನದ ಕಿರು ವೀಡಿಯೊ ಆ್ಯಪ್ ಟಿಕ್ ಟಾಕ್ ಸೇರಿದಂತೆ 59 ಚೀನೀ ಆ್ಯಪ್ ಗಳನ್ನು ಭಾರತ ಇತ್ತೀಚೆಗೆ ನಿಷೇಧಿಸಿತ್ತು. ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತಗಳ ನಡುವಿನ ಗಡಿ ಸಂಘರ್ಷ ಉಲ್ಬಣಿಸಿದ ಬಳಿಕ ಭಾರತ ಈ ಕ್ರಮ ತೆಗೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News