ಉಡುಪಿ: ಲಕ್ಷ್ಮೀನಗರ ಯೋಗೀಶ್ ಪೂಜಾರಿ ಕೊಲೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

Update: 2020-07-08 08:08 GMT

ಮಲ್ಪೆ, ಜು.8: ತೆಂಕನಿಡಿಯೂರು ಗ್ರಾಮದ ಲಕ್ಷ್ಮೀನಗರದ ಯೋಗೀಶ್ ಪೂಜಾರಿ(26) ಕೊಲೆ ಪ್ರಕರಣದ ಆರೋಪಿಗಳನ್ನು ಜು.7ರಂದು ರಾತ್ರಿ ಕ್ಷಿಪ್ರ ಕಾರ್ಯಾಚರಣೆ ಮೂಲಕ ಬಂಧಿಸುವಲ್ಲಿ ಉಡುಪಿ ಹಾಗೂ ಮಲ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ.

ರೌಡಿ ಶೀಟರ್ ಸುಜಿತ್ ಪಿಂಟೋ(37), ಆತನ ಅಣ್ಣ ರೋಹಿತ್ ಪಿಂಟೋ(43), ಪ್ರದೀಪ್ ಯಾನೆ ಅಣ್ಣು(40), ವಿನಯ(36) ಬಂಧಿತ ಆರೋಪಿಗಳು. ಉಳಿದ ಇಬ್ಬರು ಆರೋಪಿಗಳಾದ ಗಿರೀಶ್ ಹಾಗೂ ಅನುಪ್ ಎಂಬವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಪೂರ್ವ ದ್ವೇಷಕ್ಕೆ ಸಂಬಂಧಿಸಿ ಜು.6ರಂದು ರಾತ್ರಿ ಕುಡಿದ ಮತ್ತಿನಲ್ಲಿ ದುಷ್ಕರ್ಮಿಗಳು ಯೋಗೀಶ್ ಪೂಜಾರಿಯ ಹೊಟ್ಟೆ ಮತ್ತು ಬೆನ್ನಿನ ಭಾಗಗಳಿಗೆ ಚೂರಿಯಿಂದ ತಿವಿದು ಕೊಲೆ ಮಾಡಿ ಪರಾರಿಯಾಗಿದ್ದರು. ಆರೋಪಿಗಳ ಬಂಧನಕ್ಕಾಗಿ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಮಲ್ಪೆ, ಉಡುಪಿ ನಗರ ಮತ್ತು ನಗರ ಕ್ರೈಮ್ ಎಸ್ಸೈಗಳ ಮೂರು ತಂಡಗಳನ್ನು ರಚಿಸಲಾಗಿತ್ತು.

ತನಿಖೆ ಚುರುಕುಗೊಳಿಸಿದ ತಂಡ ಜು.7ರಂದು ರಾತ್ರಿ ಕಲ್ಯಾಣಪುರದಲ್ಲಿ ಆರೋಪಿಗಳನ್ನು ಬಂಧಿಸಿದೆ. ಕೃತ್ಯಕ್ಕೆ ಬಳಸಿದ ಕಾರು ಮತ್ತು ಚೂರಿಯನ್ನು ವಶ ಪಡಿಸಿಕೊಳ್ಳಲಾಗಿದೆ. ಇಂದು ಸಂಜೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆರೋಪಿಗಳ ವಿರುದ್ಧ ಮಲ್ಪೆಪೊಲೀಸ್ ಠಾಣೆಯಲ್ಲಿ ಕಲಂ: 143, 147, 148, 302 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News