ಕಾಸರಗೋಡು ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಮೊದಲ ಬಲಿ

Update: 2020-07-08 09:44 GMT

ಕಾಸರಗೋಡು, ಜು.8: ಕೊರೋನ ವೈರಸ್ ಸೋಂಕಿಗೆ ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಬಲಿಯಾಗಿದ್ದು, ಮಂಗಳವಾರ ಸಂಜೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟ ಮೊಗ್ರಾಲ್ ಪುತ್ತೂರು ನಿವಾಸಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ.

ಹುಬ್ಬಳ್ಳಿಯಲ್ಲಿ ವ್ಯಾಪಾರಿಯಾಗಿದ್ದ ಮೊಗ್ರಾಲ್ ಪುತ್ತೂರು ನಿವಾಸಿಯನ್ನು ಮಂಗಳವಾರ ಗಂಭೀರ ಅನಾರೋಗ್ಯ ಸ್ಥಿತಿಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಿಸಿದ ಕೆಲವೇ ನಿಮಿಷಗಳಲ್ಲಿ ಅವರು ಮೃತಪಟ್ಟಿದ್ದರು.

ಈ ವ್ಯಕ್ತಿಯನ್ನು ಹುಬ್ಬಳ್ಳಿಯಿಂದ ಆ್ಯಂಬುಲೆನ್ಸ್ ಮೂಲಕ ತಲಪಾಡಿ ತನಕ ಕರೆತರಲಾಗಿತ್ತು. ಅಲ್ಲಿಂದ ಕಾರೊಂದರ ಮೂಲಕ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿತ್ತು. ಜನರಲ್ ಆಸ್ಪತ್ರೆಯಲ್ಲಿ ನಡೆಸಿದ ಪ್ರಾಥಮಿಕ ತಪಾಸಣೆಯ ವೇಳೆ ಈ ವ್ಯಕ್ತಿ ಸೋಂಕಿಗೆ ಒಳಗಾಗಿರುವುದು ತಿಳಿದುಬಂದಿತ್ತು. ಆದರೂ ಪಾಸಿಟಿವ್ ದೃಢಪಡಿಸಲು ಗಂಟಲ ದ್ರವವನ್ನು ಪೆರಿಯದ ಕೇಂದ್ರ ವಿದ್ಯಾಲಯದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇಂದು ಅಪರಾಹ್ನ ಲಭಿಸಿದ ವೈದ್ಯಕೀಯ ವರದಿಯಲ್ಲಿ ಈ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ವ್ಯಕ್ತಿಯನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆತಂದಿದ್ದ ಇಬ್ಬರು ಸಂಬಂಧಿಕರು ಇದೀಗ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಮೃತ ವ್ಯಕ್ತಿಯ ದಫನ ಕೋವಿಡ್ ಮಾನದಂಡದಂತೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಫೆಬ್ರವರಿ ಮೂರರಂದು ಮೊದಲ ಕೊರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಇದುವರೆಗೆ 534 ಮಂದಿಗೆ ಜಿಲ್ಲೆಯಲ್ಲಿ ಸೋಂಕು ದೃಢಪಟ್ಟಿದ್ದು, 399 ಮಂದಿ ಗುಣಮುಖರಾಗಿದ್ದಾರೆ. 135 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಹುಬ್ಬಳ್ಳಿಯಿಂದ ಗಂಭೀರ ಸ್ಥಿತಿಯಲ್ಲಿ ಕರೆತರಲಾಗಿದ್ದ ಮೊಗ್ರಾಲ್ ಪುತ್ತೂರು ನಿವಾಸಿ ಕೊರೋನದಿಂದ ಕೊನೆಯುಸಿರೆಳೆಯುವುದರೊಂದಿಗೆ ಜಿಲ್ಲೆಯಲ್ಲಿ ಕೊರೋನಗೆ ಮೊದಲ ಬಲಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News