ಪಡುಬಿದ್ರಿ ಬಾಲಕರ ವಿದ್ಯಾರ್ಥಿನಿಲಯಕ್ಕೆ ಶಿಲಾನ್ಯಾಸ

Update: 2020-07-08 12:02 GMT

ಪಡುಬಿದ್ರಿ: ಪಡುಬಿದ್ರಿಯಲ್ಲಿನ  1.14 ಕೋಟಿ ರೂ. ವಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ವಿಸ್ಕೃತ ಕಟ್ಟಡಕ್ಕೆ ಬುಧವಾರ ಶಾಸಕ ಲಾಲಾಜಿ ಮೆಂಡನ್ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವ ಅನ್ಯ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಕ್ಕೆ ಮೊದಲ ಆದ್ಯತೆ ನೀಡುವಂತೆ ಸರ್ಕಾರಕ್ಕೆ ಒತ್ತಡ ತರಲಾಗಿದೆ. ಕಾಪು ಕ್ಷೇತ್ರದ 12 ವಿವಿಧ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡುವ ಜವಾಬ್ದಾರಿ ಶಾಸಕರ ಮೇಲಿದೆ ಎಂದರು. 

ಪಡುಬಿದ್ರಿ ಕೆಪಿಎಸ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು.
ಮೂಳೂರಿನಿಂದ ಎರ್ಮಾಳುವರೆಗೆ ಏಡಿಬಿ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಶಾಶ್ವತ ತಡೆಗೋಡೆ ಕಾಮಗಾರಿ 80 ಶೇಕಡಾ ಪೂರ್ಣಗೊಂಡಿದೆ. ಬಾಕಿ ಕಾಮಗಾರಿ ಶೀಘ್ರ ಪೂರ್ಣ ಗೊಳಿಸಲಾಗುವುದು ಎಂದು ಲಾಲಾಜಿ ವಿವರಿಸಿದರು. 

ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ ಪಡುಬಿದ್ರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೀತಾ ಗುರುರಾಜ್, ನಿರ್ಮಿತಿ ಕೇಂದ್ರ ಹಿರಿಯ ಇಂಜಿನಿಯರ್ ದಿವಾಕರ್, ಕಿರಿಯ ಇಂಜಿನಿಯರ್ ಮುಕೇಶ್, ಬಿಜೆಪಿ ಪ್ರಮುಖರಾದ ರಮಾಕಾಂತ ದೇವಾಡಿಗ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಮಿಥುನ್ ಹೆಗ್ಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News