ಸಿಟಿಬಸ್ ದರ 13ರೂ.ನಿಂದ 20ರೂ.ಗೆ ಹೆಚ್ಚಳ: ಉಡುಪಿ ಬ್ಲಾಕ್ ಕಾಂಗ್ರೆಸ್ ಖಂಡನೆ

Update: 2020-07-08 13:00 GMT

ಉಡುಪಿ, ಜು.8: ಕೆಲವೆಡೆ ಖಾಸಗಿ ಬಸ್‌ಗಳು ಲಾಕ್‌ಡೌನ್ ಸಡಿಲಗೊಂಡ ನಂತರ ಏಕಾಏಕಿ 13ರೂ.ನಿಂದ 20 ರೂ.ಗೆ ಟಿಕೆಟ್ ದರವನ್ನು ಹೆಚ್ಚಿಸುವ ಮೂಲಕ ಕೋವಿಡ್ -19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಜನರನ್ನು ಸುಲಿಗೆ ಮಾಡುತ್ತಿವೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.

ಉಡುಪಿ ನಗರ ಸಾರಿಗೆ ಸರಕಾರಿ ನರ್ಮ್ ಬಸ್‌ಗಳ ಬದಲಿಗೆ ಲಾಕ್‌ಡೌನ್ ಸಡಿಲಿಕೆ ನಂತರ ಕೆಲವೆಡೆ ಲಿಂಕ್ ಬಸ್‌ಗಳನ್ನು ಸಂಚಾರಕ್ಕೆ ವ್ಯವಸ್ಥೆಗೊಳಿಸಿದ್ದರು. ಎರಡನೇ ಹಂತದಲ್ಲಿ ಖಾಸಗಿ ಬಸ್‌ಗಳ ಸಂಚಾರ ಪ್ರಾರಂಭವಾಗಿ ಕಳೆದ 3 ದಿನಗಳಿಂದ ಸರಕಾರಿ ಬಸ್‌ಗಳು ತಮ್ಮ ಸಂಚಾರವನ್ನು ನಿಲ್ಲಿಸಿವೆ ಎಂದು ಕಾಂಗ್ರೆಸ್ ದೂರಿದೆ.

ಬಸ್‌ಗಳಲ್ಲಿನ ಎಲ್ಲ ರೀತಿಯ ರಿಯಾಯಿತಿಗಳನ್ನು ರದ್ದುಗೊಳಿಸಿದ್ದು, ಜನರ ಹಿತರಕ್ಷಣೆ ಮಾಡಬೇಕಾದ ಉಡುಪಿ ಶಾಸಕರು ಸರಕಾರಿ ನರ್ಮ್ ಬಸ್‌ಗಳನ್ನು ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ಭಾಸವಾಗುತ್ತಿದೆ. ಜಿಲ್ಲಾಡಳಿತ ಹಾಗೂ ಆರ್‌ಟಿಓರವರ ಹತೋಟಿಯಲ್ಲಿ ಉಡುಪಿ ನಗರ ಸಾರಿಗೆ ಇಲ್ಲವಾಗಿದೆ.  ಹೀಗಾಗಿ ಬಸ್ ಮಾಲಕರು ಜನರನ್ನು ಲೂಟಿಗೈಯುತ್ತಿದ್ದಾರೆ. ಕೇಂದ್ರ ಸರಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.ಕೇಂದ್ರ ರಾಜ್ಯ ಸರಕಾರಗಳು ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಗರಿಷ್ಟ ಆರ್ಥಿಕ ನೆರವು ನೀಡುವ ಮತ್ತು ಬಸ್ ಮಾಲಕರಿಗೆ ತೆರಿಗೆ ಮನ್ನಾ ಮಾಡುವ ಮೂಲಕ ಈ ಸಂಕಷ್ಟದ ಕಾಲದಲ್ಲಿ ಸಹಾಯ ಮಾಡದಿದ್ದಲ್ಲಿ ಸಾರಿಗೆ ಉದ್ಯಮ ನಶಿಸಿ ಹೋಗಿ ಉದ್ಯಮವನ್ನು ನಂಬಿ ಬದುಕುವ ಕುಟುಂಬಗಳು ಬೀದಿ ಪಾಲಾಗುವ ಸಾದ್ಯತೆ ಇದೆ. ಆದುದರಿಂದ ಸರಕಾರಗಳು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಉಡುಪಿ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯ ಪ್ರಶಾಂತ್ ಪೂಜಾರಿ, ನಗರಸಭಾ ಸದಸ್ಯ ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News