×
Ad

ಯುಎಇಯಲ್ಲಿ ಸಂಕಷ್ಟದಲ್ಲಿದ್ದ 178 ಭಟ್ಕಳಿಗರು ತಾಯ್ನಾಡಿಗೆ

Update: 2020-07-08 18:51 IST

ಭಟ್ಕಳ: ಲಾಕ್ ಡೌನ್ ನಿಂದಾಗಿ ಯುಎಇಯಲ್ಲಿ ಸಿಲುಕಿದ್ದ ಭಟ್ಕಳ ಮತ್ತು ಸುತ್ತಮುತ್ತಲಿನ 178 ಪ್ರಯಾಣಿಕರನ್ನು ಹೊತ್ತ ಸ್ಪೈಸ್ ಜೆಟ್ ಚಾರ್ಟರ್ಡ್ ವಿಮಾನವು ಮಂಗಳವಾರ ತಡರಾತ್ರಿ 1:30 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಮಂಗಳೂರಿನಿಂದ ವಿಶೇಷ ಬಸ್ಸುಗಳ ಮೂಲಕ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ಬುಧವಾರ ಬೆಳಗ್ಗೆ ಭಟ್ಕಳ ತಲುಪಿದ್ದಾರೆ.

103 ಪುರುಷರನ್ನು ಜಾಮಿಯಾಬಾದ್ ರಸ್ತೆಯಲ್ಲಿರುವ ಅಲಿ ಪಬ್ಲಿಕ್ ಶಾಲೆಯಲ್ಲಿ ಕ್ವಾರೆಂಟೈನ್ ಮಾಡಿದರೆ, ಮಕ್ಕಳು ಸೇರಿದಂತೆ ಉಳಿದ 75 ಮಂದಿಯನ್ನು ಖಾಸಗಿ ಹೋಟೆಲ್‌ಗಳಲ್ಲಿ ಕ್ವಾರೆಂಟೈನ್ ಮಾಡಲಾಗಿದೆ.

ದುಬೈನ ಪ್ರಸಿದ್ಧ ಉದ್ಯಮಿ ಮತ್ತು ಸಾಮಾಜಿಕ ಸಂಘಟನೆಯಾದ ಮಜ್ಲಿಸ್-ಇ-ಇಸ್ಲಾಹ್-ವ-ತಂಜೀಮ್ ನ ಉಪಾಧ್ಯಕ್ಷ ಅತೀಕ್-ಉರ್-ರೆಹಮಾನ್ ಮುನಿರಿ ಅವರು ಜೂನ್ 12 ರಂದು ಯುಎಇಯಲ್ಲಿ ಭಟ್ಕಳ ಮತ್ತು ಸುತ್ತಮುತ್ತಲಿನ ಜನರನ್ನು ಪ್ರಥಮ ಚಾರ್ಟರ್ಡ್ ವಿಮಾನದ ಮೂಲಕ ಭಟ್ಕಳಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದರು. ಇದೀಗ ಎರಡನೇ ಚಾರ್ಟರ್ಡ್ ವಿಮಾನದ ಮೂಲಕ ಆರು ಮಕ್ಕಳು ಸೇರಿದಂತೆ 178 ಜನರನ್ನು ಭಟ್ಕಳಕ್ಕೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ರಾತ್ರಿ 8: 30 ರ ಸುಮಾರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಸ್ ಅಲ್ ಖೈಮಾ ವಿಮಾನ ನಿಲ್ದಾಣದಿಂದ ಸ್ಪೈಸ್ ಜೆಟ್ ಹೊರಟಿದ್ದ ವಿಮಾನವು ತಡರಾತ್ರಿ 1.30 ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಿತು. ಭಟ್ಕಲ್ ಮುಸ್ಲಿಂ ಜಮಾಅತ್ ಮಂಗಳೂರಿನ ಪದಾಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ಇದ್ದು, ಪ್ರಯಾಣಿಕರಿಗೆ ಊಟ ತಿಂಡಿಯ ವ್ಯವಸ್ಥೆಯನ್ನು ಮಾಡಿದ್ದರು. ನಂತರ ಎಲ್ಲಾ ಪ್ರಯಾಣಿಕರನ್ನು ಐದು ಬಸ್‌ಗಳ ಮೂಲಕ  ಭಟ್ಕಳಕ್ಕೆ ಕರೆತರಲಾಯಿತು. ಇಲ್ಲಿ ಜಿಲ್ಲಾಡಳಿತದ ನಿರ್ದೇಶನದಲ್ಲಿ ಮತ್ತು ತಂಝೀಮ್ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಎಲ್ಲರನ್ನೂ ಕ್ವಾರೆಂಟೈನ್ ಗೆ ಒಳಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News