ಕೋವಿಡ್-19: ಜು.10ರಿಂದ ಮಧ್ಯಾಹ್ನದ ಬಳಿಕ ಪುದು ಗ್ರಾಮದಲ್ಲಿ ಅಂಗಡಿ ಮುಂಗಟ್ಟು ಸ್ವಯಂ ಪ್ರೇರಿತ ಬಂದ್

Update: 2020-07-08 13:58 GMT

ಬಂಟ್ವಾಳ, ಜು.8: ತಾಲೂಕಿನ ಪುದು ಗ್ರಾಮದಲ್ಲಿ ಕೋವಿಡ್ - 19 (ಕೊರೋನ) ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿರುವ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಜುಲೈ 10ರಿಂದ ಎರಡು ವಾರಗಳ ಕಾಲ ಮಧ್ಯಾಹ್ನ 2 ಗಂಟೆಯ ಬಳಿಕ ಸ್ವಯಂ ಪ್ರೇರಿತ ಬಂದ್ ಗೆ ನಿರ್ಧರಿಸಲಾಗಿದೆ.  

ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಪಂಚಾಯತ್ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ನಿರ್ಧಾರ ಮಾಡಲಾಯಿತು. ಫರಂಗಿಪೇಟೆ ಸಮೀಪದ ಹತ್ತನೇ ಮೈಲುಗಲ್ಲು ಮತ್ತು ಕುಂಜತ್ಕಲದಲ್ಲಿ ಇಬ್ಬರಿಗೆ ಬುಧವಾರ ಕೊರೋನ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. 

ಜುಲೈ 10ರಿಂದ ಜುಲೈ 24ರ ವರೆಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಲಾಗುವುದು. ಬಳಿಕ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುವುದು.‌ ಇದಕ್ಕೆ ರಿಕ್ಷಾ ಯೂನಿಯನ್‌ ನವರು, ವರ್ತಕರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಸಭೆಗೆ ತಿಳಿಸಲಾಯಿತು. 

ಗ್ರಾಮದಲ್ಲಿ ಕೊರೋ‌ನ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದೆ. ಈಗಾಗಲೇ ಗ್ರಾಮದಲ್ಲಿ 5 ಮಂದಿಗೆ ಸೋಂಕು ಪಾಸಿಟಿವ್ ಆಗಿದೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಗ್ರಾಮದಲ್ಲಿ ಅಂಗಡಿ ಮುಂಗಟ್ಟುಗಳ ಸ್ವಯಂ ಪ್ರೇರಿತ ಬಂದ್‌ಗೆ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಆಟೋ ರಿಕ್ಷಾ ಯೂನಿಯನ್, ವರ್ತಕರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅಧ್ಯಕ್ಷ‌ ರಮ್ಲಾನ್ ಮಾರಿಪಳ್ಳ ತಿಳಿಸಿದರು.

ಗ್ರಾಮದ ಜನರು ಮನೆಯಿಂದ ಅನಗತ್ಯ ಹೊರ ಹೋಗಬಾರದು. ಸಾರ್ವಜನಿಕ ಸ್ಥಳದಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು‌ ಮನವಿ ಮಾಡಿದ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಬಂದ್ ಬಗ್ಗೆ ವಾರ್ಡ್ ಗಳಲ್ಲಿ ಮಾಹಿತಿ ನೀಡಲು ಆಯಾಯ ವಾರ್ಡ್ ಸದಸ್ಯರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದರು. 

ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಸದಸ್ಯರಾದ ಭಾಸ್ಕರ್ ರೈ, ಎಂ.ಹುಸೇನ್, ಇಕ್ಬಾಲ್ ಸುಜೀರ್, ನಝೀರ್ ಕುಂಜರ್ಕಳ, ರಿಯಾಝ್ ಕುಂಪನಮಜಲು, ಝಾಹೀರ್ ಕುಂಪನಮಜಲು, ಮುಸ್ತಫ ಅಮ್ಮೆಮಾರ್, ಮನೋಜ್ ಆಚಾರ್ಯ ನಾಣ್ಯ, ಸಂತೋಷ್ ನೆತ್ತರಕೆರೆ, ಮುಹಮ್ಮದ್ ಫರಂಗಿಪೇಟೆ, ಕಿಶೋರ್‌ಕುಮಾರ್, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಆನಂದ್, ಗ್ರಾಮ ಲೆಕ್ಕಿಗ ಬಾಲಕೃಷ್ಣ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News