ಭಾರತದಲ್ಲೇ ಜೆನೆರಿಕ್ ಉತ್ಪಾದನೆಗೆ ಅನುಮತಿ ನೀಡಲು ಸಿಪಿಎಂ ಆಗ್ರಹ

Update: 2020-07-08 14:20 GMT

ಉಡುಪಿ, ಜು.8: ಕೋವಿಡ್-19 ಶುಶ್ರೂಷೆಯಲ್ಲಿ ಪರಿಣಾಮಕಾರಿಯೆಂದು ಕಂಡುಬಂದಿರುವ, ಪೇಟೆಂಟ್ ಗುತ್ತೇದಾರಿಕೆಯಿಂದಾಗಿ ವಿಪರೀತ ತುಟ್ಟಿಯಾಗಿರುವ ರೆಮ್ಡೆಸಿವಿರ್ ಔಷಧಿಯನ್ನು ಭಾರತದಲ್ಲಿ ಜೆನೆರಿಕ್ ಔಷಧಿಯಾಗಿ ತಯಾರಿಸಲು ಕಡ್ಡಾಯ ಅನುಮತಿ ನೀಡಬೇಕು ಎಂದು ಉಡುಪಿ ಜಿಲ್ಲಾ ಸಿಪಿಐಎಂ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.

ಭಾರತದ ಔಷಧಿ ಮಹಾ ನಿಯಂತ್ರಕರು ಭಾರತದಲ್ಲಿ ಕೋವಿಡ್-19 ರೋಗಿಗಳಿಗೆ ರೆಮ್ಡೆಸಿವಿರ್ ಬಳಸಲು ಮಂಜೂರಾತಿ ನೀಡಿದ್ದಾರೆ. ಆದರೆ ಒಂದೆಡೆಯಲ್ಲಿ ಅಮೆರಿಕಾ ಸಮಸ್ತ ದಾಸ್ತಾನನ್ನು ಖರೀದಿಸಿ ಬಿಟ್ಟಿದೆ. ಇನ್ನೊಂದೆಡೆಯಲ್ಲಿ ಪೇಟೆಂಟ್ ಗುತ್ತೇದಾರಿಕೆಯಿಂದಾಗಿ ಅದರ ಬೆಲೆ ವಿಪರೀತ ಮಟ್ಟದಲ್ಲಿದೆ. ಇದರಿಂದಾಗಿ ಭಾರತೀಯ ರೋಗಿಗಳಿಗೆ ಅದು ಲಭ್ಯವಾಗುವುದಿಲ್ಲ ಅಥವಾ ವಿಪರೀತ ಬೆಲೆಯಿಂದಾಗಿ ಕೊಳ್ಳಲಾಗುವುದಿಲ್ಲ ಎಂದು ಸಿಪಿಎಂ ತಿಳಿಸಿದೆ.

ಗಿಲಿಯಡ್ ಕಂಪನಿ ರೆಮ್ಡೆಸಿವಿರ್ಗೆ ಸುಲಿಗೆಕೋರ ಬೆಲೆ ವಿಧಿಸಿರುವುದರಿಂದ ಸರಕಾರ ಕೂಡಲೇ ಕೆಲವು ಭಾರತೀಯ ತಯಾರಕರಿಗೆ ಇದನ್ನು ತಯಾರಿಸಲು ಕಡ್ಡಾಯ ಅನುಮತಿ ಕೊಡಬೇಕು. ಜನರ ಜೀವಗಳನ್ನು ಉಳಿಸಲು ಅತ್ಯಗತ್ಯವಾದ ಮತ್ತು ಮಹಾಮಾರಿಯನ್ನು ಎದುರಿಸುವಲ್ಲಿ ಪರಿಣಾಮಕಾರಿಯಾದ ಈ ಔಷಧಿಯ ಜೆನೆರಿಲ್ ಆವೃತ್ತಿಯನ್ನು ತಯಾರಿಸಲು ಕಡ್ಡಾಯ ಲೈಸೆನ್ಸ್ ನೀಡಬೇಕು ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News