ಉಡುಪಿ: ಗಾಳಿ-ಮಳೆಗೆ ಮನೆ ಹಾನಿ; ಲಕ್ಷಾಂತರ ರೂ. ನಷ್ಟ

Update: 2020-07-08 15:55 GMT

ಉಡುಪಿ, ಜು.8: ನಿನ್ನೆ ಇಡೀ ದಿನ ಸುರಿದ ಧಾರಾಕಾರ ಮಳೆಗೆ ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ಬಾಬು ಭಂಡಾರಿ ಎಂಬವರ ವಾಸ್ತವ್ಯದ ಪಕ್ಕಾ ಮನೆಗೆ ಭಾರೀ ಹಾನಿ ಸಂಭವಿಸಿದ್ದು ಒಂದೂವರೆ ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಅಲ್ಲದೇ ಅದೇ ಗ್ರಾಮದ ಚಂದ್ರಶೇಖರ ಬೋವಿಯವರ ಮನೆಯ ಶೀಟುಗಳು ಭಾರೀ ಗಾಳಿಗೆ ಹಾರಿಹೋಗಿದ್ದು 25,000ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ. ಶಿರೂರು ಗ್ರಾಮದ ರಾಮ ಪೂಜಾರಿ ಎಂಬವರ ವಾಸದ ಪಕ್ಕಾ ಮನೆ ಗಾಳಿ-ಮಳೆಯಿಂದ ಭಾಗಶ: ಹಾನಿಗೊಂಡಿದ್ದು 30 ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.

ಇನ್ನು ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ರಾಬಿಯ ಎಂಬವರ ಮನೆಗೂ ಭಾಗಶ: ಹಾನಿಯಾಗಿ 40 ಸಾವಿರ ರೂ. ಹಾಗೂ ಹೆಬ್ರಿ ತಾಲೂಕು ಮಡಾಮಕ್ಕಿ ಗ್ರಾಮದ ವನಜ ಶೆಡ್ತಿ ಎಂಬವರ ಮನೆಯ ಹೆಂಚು ಗಾಳಿ-ಮಳೆಗೆ ಹಾರಿಹೋಗಿದ್ದು 25,000ರೂ. ನಷ್ಟದ ಅಂದಾಜು ಮಾಡಲಾಗಿದೆ.

ಭಾರೀ ಮಳೆಯಿಂದ ಕುಂದಾಪುರ ಹಾಗೂ ಬೈಂದೂರು ತಾಲೂಕುಗಳಲ್ಲಿ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ. ಎರಡೂ ತಾಲೂಕುಗಳ ತಗ್ಗು ಪ್ರದೇಶಗಳಿಗೆ, ತೋಟ ಗದ್ದೆಗಳಿಗೆ ನೀರು ನುಗ್ಗಿದ್ದು, ಜಲಾವೃತಗೊಂಡಿವೆ. ಆದರೆ ವಾಸದ ಮನೆಗಳಿಗೆ ಯಾವುದೇ ಅಪಾಯವಾದ ವರದಿ ಬಂದಿಲ್ಲ.

116ಮಿ.ಮೀ. ಮಳೆ: ಸೋಮವಾರ ರಾತ್ರಿಯಿಂದ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ಬುಧವಾರ ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 116ಮಿ.ಮೀ. ಮಳೆಯಾಗಿದೆ.

ಉಡುಪಿಯಲ್ಲಿ 100.6 ಮಿ.ಮೀ., ಕುಂದಾಪುರದಲ್ಲಿ 128.5ಮಿ.ಮೀ. ಹಾಗೂ ಕಾರ್ಕಳದಲ್ಲಿ 107.5 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಮಾಹಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News