ಉತ್ತರಪ್ರದೇಶದ ಕುಖ್ಯಾತ ಗ್ಯಾಂಗ್‌ಸ್ಟರ್ ವಿಕಾಸ್ ದುಬೆ ಕೊನೆಗೂ ಬಂಧನ

Update: 2020-07-09 18:06 GMT

ಹೊಸದಿಲ್ಲಿ, ಜು.9: ಕಳೆದ ವಾರ ನಡೆದ 8 ಪೊಲೀಸರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಐದು ದಿನ ಪೊಲೀಸರಿಂದ ತಲೆಮರೆಸಿಕೊಂಡು ಓಡಾಡಿದ್ದ ಉತ್ತರಪ್ರದೇಶದ ಕುಖ್ಯಾತ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯನ್ನು ಕಡೆಗೂ ಮಧ್ಯಪ್ರದೇಶದ ಉಜ್ಜೈನ್ ನ ದೇವಸ್ಥಾನದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬುಧವಾರ ಹರ್ಯಾಣದ ಫರೀದಾಬಾದ್ ನ ಹೋಟೆಲ್ ನಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ ದುಬೆ ಸುಮಾರು 700 ಕಿ.ಮೀ ದೂರ ರಸ್ತೆ ಮೂಲಕ ಪ್ರಯಾಣಿಸಿ ಗುರುವಾರ ಬೆಳಿಗ್ಗೆ ಮಧ್ಯಪ್ರದೇಶದ ಉಜ್ಜೈನ್ ಮಹಾಕಾಳ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರಬರುತ್ತಿದ್ದಾಗ ಆತನನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸರು ತನ್ನನ್ನು ವ್ಯಾನ್ ನತ್ತ ಕರೆದೊಯ್ಯುತ್ತಿದ್ದಂತೆಯೇ ಆತ ‘ನಾನು ವಿಕಾಸ್ ದುಬೆ, ಕಾನ್ಪುರದ ನಿವಾಸಿ’ ಎಂದು ಬೊಬ್ಬೆ ಹೊಡೆದ ಎಂದು ವರದಿಯಾಗಿದೆ.

ದುಬೆ ಗುರುವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ದೇವಸ್ಥಾನದ ಹಿಂದಿನ ಬಾಗಿಲಿನಿಂದ ದೇವಸ್ಥಾನದೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದ . ದೇವಸ್ಥಾನದಲ್ಲಿ ಹರಕೆ ಚೀಟಿಯನ್ನು ಪಡೆಯುತ್ತಿದ್ದಾಗ ಸಮೀಪದ ಅಂಗಡಿಯ ಮಾಲಕ ಈತನ ಗುರುತು ಪತ್ತೆಹಚ್ಚಿ ಭದ್ರತಾ ಸಿಬ್ಬಂದಿಗಳನ್ನು ಎಚ್ಚರಿಸಿದ್ದಾನೆ. ದುಬೆ ದೇವಸ್ಥಾನದಿಂದ ಹೊರಬಂದಾಗ, ಭದ್ರತಾ ಸಿಬ್ಬಂದಿ ಆತನನ್ನು ಪ್ರಶ್ನಿಸಿದ್ದಾರೆ. ಆಗ ಆತ ಪೌಲ್ ಎಂಬ ಹೆಸರಿನ ನಕಲಿ ಗುರುತು ಪತ್ರ ತೋರಿಸಿದ್ದಾನೆ. ಈ ಬಗ್ಗೆ ಮತ್ತಷ್ಟು ಪ್ರಶ್ನಿಸಿದಾಗ ಭದ್ರತಾ ಸಿಬ್ಬಂದಿಯ ಮೇಲೆ ಕೈಮಾಡಿದ್ದಾನೆ. ಆಗ ಉಳಿದವರು ಸೇರಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದುಬೆಯ ಬಂಧನದ ಬಗ್ಗೆ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಗೆ ಮಾಹಿತಿ ನೀಡಲಾಗಿದೆ. ಆತನನ್ನು ಶೀಘ್ರವೇ ಉತ್ತರಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

 ಬಿಳಿ ಟಿಶರ್ಟ್ ಹಾಗೂ ಮಾಸ್ಕ್ ಧರಿಸಿದ್ದ ದುಬೆಯನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಿರುವ ಸಿಸಿಟಿವಿ ದೃಶ್ಯದ ಫೂಟೇಜ್ ವೈರಲ್ ಆಗಿದೆ. ಫರೀದಾಬಾದ್ ನಿಂದ ರಾಜಸ್ತಾನದ ಕೋಟಾ ಮಾರ್ಗವಾಗಿ ತನ್ನ ಸ್ವಂತ ಕಾರಿನಲ್ಲಿ ಉಜ್ಜೈನ್ ತಲುಪಿದ್ದಾನೆ. ಆತನ ಇಬ್ಬರು ಸಹಚರರೂ ಕಾರಿನಲ್ಲಿದ್ದರು. ಪೊಲೀಸರು ಬೆನ್ನು ಹತ್ತಿದ್ದರೂ ಈತ ತನ್ನದೇ ಕಾರಿನಲ್ಲಿ ನಾಲ್ಕು ರಾಜ್ಯಗಳಲ್ಲಿ ಓಡಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಅಷ್ಟೊಂದು ದೊಡ್ಡ ಘಟನೆ ನಡೆದ ಬಳಿಕವೂ ನಾವು ಆತನನ್ನು ಬಂಧಿಸಲಾಗಲಿಲ್ಲ ಮತ್ತು ಆತ ಆರಾಮವಾಗಿ ನಾಲ್ಕು ರಾಜ್ಯಗಳಲ್ಲಿ ಓಡಾಡಿಕೊಂಡಿದ್ದ. ಕಡೆಗೆ ಆತನೇ ಉಜ್ಜೈನ್ ನಲ್ಲಿ ಶರಣಾಗಿದ್ದಾನೆ. ಈ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಉತ್ತರಪ್ರದೇಶದ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಟ್ವೀಟ್ ಮಾಡಿದ್ದಾರೆ.

ದುಬೆಯನ್ನು ಬಂಧಿಸಲಾಗಿದೆಯೇ ಅಥವಾ ಆತ ಶರಣಾಗಿರುವುದೇ ಎಂಬುದನ್ನು ಸರಕಾರ ಬಹಿರಂಗಗೊಳಿಸಬೇಕು. ಅಲ್ಲದೆ ಆತನ ಮೊಬೈಲ್ ಕರೆಗಳ ದಾಖಲೆಯನ್ನು ಬಹಿರಂಗಗೊಳಿಸಬೇಕು ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News