ಸುಳ್ಯ ಸರಕಾರಿ ಆಸ್ಪತ್ರೆ ವೈದ್ಯರು, ನರ್ಸ್ ಸಹಿತ 6 ಮಂದಿಗೆ ಕೊರೋನ ಪಾಸಿಟಿವ್

Update: 2020-07-09 05:47 GMT

ಸುಳ್ಯ, ಜು.9: ಸುಳ್ಯ ಸರಕಾರಿ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಸೇರಿ ಒಟ್ಟು ಆರು ಮಂದಿಗೆ ಕೊರೋನ ಪಾಸಿಟಿವ್ ಬಂದಿದೆ.

ಕೆಲ ದಿನಗಳ ಹಿಂದೆ ಆಸ್ಪತ್ರೆಯಲ್ಲಿ ದಾಖಲಾದ ವ್ಯಕ್ತಿಯೊಬ್ಬರಿಗೆ ಕೊರೋನ ಸೋಂಕು ದೃಢಪಟ್ಟಿತ್ತು. ಬಳಿಕ ಅವರನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ನಡುವೆ ಸೋಂಕಿತ ಆ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ನರ್ಸ್‌ಗೆ ಕೂಡಾ ಕೊರೋನ ದೃಢವಾಗಿತ್ತು. ಇದೀಗ ಸರಕಾರಿ ಆಸ್ಪತ್ರೆಯ ಒಬ್ಬರು ವೈದ್ಯಾಧಿಕಾರಿ, ಮೂವರು ನರ್ಸ್ ಗಳು ಹಾಗೂ ಇಬ್ಬರು ಡಯಾಲಿಸಿಸ್ ವಿಭಾಗದ ತಂತ್ರಜ್ಞರಿಗೆ ಕೊರೋನ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಇಂದು (ಜು.9) ಮತ್ತು ಜು.10ರಂದು ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.

ಆಸ್ಪತ್ರೆಯಲ್ಲಿ ಸದ್ಯ 17 ಮಂದಿ ಒಳರೋಗಿಗಳಿದ್ದು, ಅವರಿಗೆ ಚಿಕಿತ್ಸೆ ನೀಡಲು ಒಬ್ಬರು ವೈದ್ಯಾಧಿಕಾರಿ ಹಾಗೂ ಮೂವರು ನರ್ಸ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಇಂದು ಮತ್ತು ನಾಳೆ ಸ್ಯಾನಿಟೈಸೇಶನ್ ನಡೆಯುವುದರಿಂದ ಸೀಲ್ ಡೌನ್ ಮಾಡಲಾಗುವುದು. ಹೊಸದಾಗಿ ಬರುವ ರೋಗಿಗಳಿಗೆ ಪ್ರವೇಶವಿರುವುದಿಲ್ಲ. ಹೆರಿಗೆಗೆ ಬರುವವರಿಗೆ ಕೂಡ ಅವಕಾಶವಿರುವುದಿಲ್ಲ. ಡಯಾಲಿಸಿಸ್ ಗೆ ಕೂಡ ಅವಕಾಶವಿರುವುದಿಲ್ಲ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News