‘‘ಕೋವಿಡ್‌ಮುಕ್ತರಾದರೂ ಇನ್ನೂ 10 ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಿ’’

Update: 2020-07-09 07:28 GMT
ಸಾಂದರ್ಭಿಕ ಚಿತ್ರ

►‘‘ಕನಿಷ್ಠ ಸೌಲಭ್ಯವೂ ಇಲ್ಲ, ಸೂಕ್ತ ಚಿಕಿತ್ಸೆಯೂ ಇಲ್ಲ’’

ಮಂಗಳೂರು, ಜು.9: ಕೊರೋನ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಸೋಂಕುಮುಕ್ತರಾದರೂ ಇನ್ನೂ 10 ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿಯಬೇಕು ಎಂದು ಆಸ್ಪತ್ರೆಯವರು ಒತ್ತಾಯಿಸುತ್ತಿದ್ದಾರೆ ಎಂಬ ಆರೋಪವು ನಗರದ ‘ಇಂಡಿಯಾನ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್ ವಿರುದ್ಧ ಕೇಳಿಬಂದಿದೆ.

ಇಂಡಿಯಾನ ಆಸ್ಪತ್ರೆಯಲ್ಲಿ ಕೊರೋನ ಚಿಕಿತ್ಸೆ ಪಡೆಯುತ್ತಿರುವ ಅಡ್ಡೂರಿನ ಬಿ.ಜಕ್ರಿ ಎಂಬವರು ಈ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ‘‘ಕೊರೋನ ಸೋಂಕಿನಿಂದಾಗಿ ಇಂಡಿಯಾನ ಆಸ್ಪತ್ರೆಗೆ ಜೂನ್ 30ರಂದು ನನ್ನ ಪುತ್ರ ಮುಹಮ್ಮದ್ ಹಾರಿಸ್(34) ಹಾಗೂ ಜುಲೈ 1ರಂದು ನಾನು (ಬಿ.ಜಕ್ರಿ) ದಾಖಲಾದೆವು. ನಮಗೆ ಶೀತ ಹೊರತುಪಡಿಸಿದರೆ ಬೇರಾವುದೇ ಕೊರೋನ ಲಕ್ಷಣಗಳಿರಲಿಲ್ಲ. ಆಸ್ಪತ್ರೆ ಸೇರಿದ ನಾಲ್ಕೈದು ದಿನಗಳಲ್ಲೇ ನಾವು ಸಂಪೂರ್ಣ ಗುಣಮುಖರಾದೆವು. ಚಿಕಿತ್ಸೆ ನೀಡಿರುವ ವೈದ್ಯರು ನೀವು ಮನೆಗೆ ತೆರಳಬಹುದು ಎಂದು ಹೇಳುತ್ತಿದ್ದಾರೆ. ಆದರೆ ಇಂಡಿಯಾನ ಆಸ್ಪತ್ರೆಯ ಆಡಳಿತವು ಇನ್ನೂ 10 ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿಯುವಂತೆ ಒತ್ತಡ ಹೇರುತ್ತಿದೆ’ ಎಂದು ಜಕ್ರಿ ಆರೋಪಿಸಿದ್ದಾರೆ.

‘‘ಇಂಡಿಯಾನ ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರಿಗೆ ದಿನವೊಂದಕ್ಕೆ 12 ಸಾವಿರ ರೂ.ನ ಚಿಕಿತ್ಸಾ ಪ್ಯಾಕೇಜ್ ಅಂತ ಮಾಡಿದ್ದಾರೆ. ಅದರಂತೆ ಚಿಕಿತ್ಸೆಗೆ ನಾವು ಒಪ್ಪಿಗೆ ಸೂಚಿಸಿದ್ದೆವು. ಇಲ್ಲಿಯವರೆಗೆ ಪುತ್ರ ಹಾರಿಸ್ ನ ಬಿಲ್ 1,17,000 ರೂ. ಹಾಗೂ ನನ್ನದು 1,12,000 ರೂ. ಆಗಿದೆ. ಆದರೆ ನಮಗೆ ಪ್ಯಾಕೇಜ್‌ನಲ್ಲಿ ಘೋಷಿಸಿದಂತೆ ಚಿಕಿತ್ಸೆ ಸಹಿತ ಸೌಕರ್ಯ ನೀಡಿಲ್ಲ’’ ಎಂದು ಬಿ.ಜಕ್ರಿ ದೂರಿದ್ದಾರೆ.

‘‘ಆಸ್ಪತ್ರೆಯ ಏಳನೇ ಮಹಡಿಯ 703ರ ಬೆಡ್‌ನಲ್ಲಿ ಹಾರಿಸ್, 707ರ ಬೆಡ್‌ನಲ್ಲಿ ನಾನು ದಾಖಲಾಗಿದ್ದೆ. ಪ್ಯಾಕೇಜ್‌ನಲ್ಲಿರುವಂತೆ ಆಹಾರ, ಬಿಸಿನೀರಿಗೆ ಹಣ ಪಡೆಯು ಆಸ್ಪತ್ರೆಯು ರೋಗಿಗಳಿಗೆ ಕನಿಷ್ಠ ಸೌಲಭ್ಯ ಕೂಡಾ ಕಲ್ಪಿಸುತ್ತಿಲ್ಲ. ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ನಾಲ್ಕು ದಿನಗಳಿಗೊಮ್ಮೆಯೂ ಕೊರೋನ ಸೋಂಕಿತರಿಗೆ ನೀಡಿರುವ ಬೆಟ್‌ಶೀಟ್‌ಗಳನ್ನು ಬದಲಾಯಿಸುತ್ತಿಲ್ಲ’’ ಎಂದು ಅವರು ಆರೋಪಿಸಿದ್ದಾರೆ.

‘‘ಈ ಆಸ್ಪತ್ರೆಯಲ್ಲಿ ರೋಗಿಗಳನ್ನು ಉಪಚರಿಸಲು ರಾತ್ರಿ ವೇಳೆಯಲ್ಲಿ ನರ್ಸ್‌ಗಳೇ ಇರುವುದಿಲ್ಲ. ಕುಡಿಯಲು ಹಾಗೂ ಸ್ನಾನಕ್ಕೆ ಬಿಸಿನೀರನ್ನೇ ಬಳಸುವಂತೆ ವೈದ್ಯರು ಸೂಚಿಸುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಬಿಸಿನೀರು ಸಿಗುವುದಿಲ್ಲ. ಕೊರೋನದಿಂದ ಮುಕ್ತರಾಗಲು ಆಸ್ಪತ್ರೆಗೆ ಬಂದಿದ್ದೇವೆಯೇ ಹೊರತು, ಮನೆಗೆ ಕೊಂಡೊಯ್ಯಲು ಅಲ್ಲ. ಇದೇ ವಾರ್ಡ್‌ನಲ್ಲಿ ಕೊರೋನದಿಂದ ಮುಕ್ತರಾದ ಮೂವರು ಲಕ್ಷಾಂತರ ರೂ. ಬಿಲ್ ಪಾವತಿಸಲು ಸಾಧ್ಯವಾಗದೇ ಏನಾದರೂ ಆಗಲಿ ಎಂದು ಜಾಗ ಖಾಲಿ ಮಾಡಿದ್ದಾರೆ. ಬಡವರು ಇಷ್ಟೊಂದು ಪ್ರಮಾಣದಲ್ಲಿ ಹಣ ಎಲ್ಲಿಂದ ಪಾವತಿಸಬೇಕು?’’ ಎಂದು ಪ್ರಶ್ನಿಸುತ್ತಾರೆ ಜಕ್ರಿ.


--

ಕೊರೋನದಿಂದ ಗುಣಮುಖರಾದವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡದೆಯೇ 10 ದಿನಗಳವರೆಗೆ ಬಲವಂತವಾಗಿ ಕೂಡಿ ಹಾಕಲಾಗುತ್ತಿದೆ. ರೋಗಿಗಳಿಗೆ ಕನಿಷ್ಠ ಸೌಲಭ್ಯ ಕಲ್ಪಿಸಿಲ್ಲ. ರೋಗಿಗಳ ಹೊದಿಕೆಯನ್ನೂ ಇಲ್ಲಿ ಬದಲಿಸುತ್ತಿಲ್ಲ. ಬಿಲ್ ಮಾತ್ರ ಲಕ್ಷಗಟ್ಟಲೇ ಅಂದರೆ ಹೇಗೆ? ಇದು ಹಣ ಪೀಕುವ ದಂಧೆಯಾಗಿದೆ. ಆರೋಪ ಹೊತ್ತಿರುವ ಇಂಡಿಯಾನ ಆಸ್ಪತ್ರೆ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು.
- ಮುನೀರ್ ಕಾಟಿಪಳ್ಳ,
ಡಿವೈಎಫ್‌ಐ ರಾಜ್ಯಾಧ್ಯಕ್ಷ

--


ಪ್ರತಿಕ್ರಿಯೆ ನೀಡದ ಆಸ್ಪತ್ರೆ ಆಡಳಿತ
ಇಂಡಿಯಾನ ಆಸ್ಪತ್ರೆಯ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ‘ವಾರ್ತಾಭಾರತಿ’ ಹಲವು ಬಾರಿ ದೂರವಾಣಿ ಮೂಲಕ ಸಂಪರ್ಕಿಸಲೂ ಯತ್ನಿಸಿದರೂ ಆಸ್ಪತ್ರೆಯವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News