ಅಂಧ ವ್ಯಕ್ತಿಗೆ ನೆರವಾಗಲು ಚಲಿಸುತ್ತಿದ್ದ ಬಸ್ ಹಿಂದೆ ಓಡಿದ ಮಹಿಳೆಗೆ ವ್ಯಾಪಕ ಪ್ರಶಂಸೆ

Update: 2020-07-09 08:36 GMT

ಕೊಚ್ಚಿ:  ಅಂಧ ವ್ಯಕ್ತಿಯೊಬ್ಬರಿಗೆ ನೆರವಾಗಲು ಮಹಿಳೆಯೊಬ್ಬರು  ಚಲಿಸುತ್ತಿರುವ ಬಸ್ಸಿನ ಹಿಂದೆ ಓಡಿ ಅದನ್ನು ನಿಲ್ಲಿಸಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯ ಮಾನವೀಯತೆಯನ್ನು ಸಾಮಾಜಿಕ ಜಾಲತಾಣದ ಜನರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಘಟನೆ ಕೇರಳದ ತಿರುವಲ್ಲ ಎಂಬಲ್ಲಿ ನಡೆದಿದೆ.

ಚಲಿಸುತ್ತಿರುವ  ಬಸ್ಸಿನ ಹಿಂದೆ ಓಡುತ್ತಿರುವ ಮಹಿಳೆಯನ್ನು ಸುಪ್ರಿಯಾ ಎಂದು ಗುರುತಿಸಲಾಗಿದ್ದು, ಆಕೆ ತಿರುವಲ್ಲ ಪಟ್ಟಣದ ಅಂಗಡಿಯೊಂದರ ಸೇಲ್ಸ್ ವುಮನ್ ಎಂದು ತಿಳಿದು ಬಂದಿದೆ.

ಬಸ್ ಚಲಿಸುತ್ತಿದ್ದಂತೆಯೇ ಅದರ ಹಿಂದೆ ಓಡಿ ಸ್ವಲ್ಪ ಹೊತ್ತು ನಿಲ್ಲುವಂತೆ ಆಕೆ ಕಂಡಕ್ಟರ್ ಬಳಿ ವಿನಂತಿಸುತ್ತಾರೆ. ಬಸ್ಸಿನ ಹಿಂದೆ ಒಬ್ಬ ವ್ಯಕ್ತಿ ಕೈಯ್ಯಲ್ಲಿ ಕೋಲು ಹಿಡಿದುಕೊಂಡು ನಿಧಾನವಾಗಿ ಬರುತ್ತಿರುವುದು ಕಾಣಿಸುತ್ತದೆ. ಮಹಿಳೆ ಮತ್ತೆ ಆ ವ್ಯಕ್ತಿಯ ಬಳಿ ಓಡಿ ಆತನನ್ನು ಬಸ್ ತನಕ ಕರೆದುಕೊಂಡು ಬಂದು ಬಸ್ ಹತ್ತಿಸುತ್ತಾರೆ.

ಈ ವೀಡಿಯೋವನ್ನು ಮೊದಲು ಐಪಿಎಸ್ ಅಧಿಕಾರಿಯೊಬ್ಬರು ಟ್ವಿಟರ್‍ನಲ್ಲಿ ಶೇರ್ ಮಾಡಿ, ‘ಈ ಜಗತ್ತು ಬದುಕಲು ಒಂದು ಉತ್ತಮ ಸ್ಥಳವನ್ನಾಗಿಸಿದ್ದಾರೆ ಈಕೆ. ಕೈಂಡ್ನೆಸ್ ಈಸ್ ಬ್ಯೂಟಿಫುಲ್’ ಎಂದು ಬರೆದಿದ್ದಾರೆ.  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News