ಅರ್ಜಿಯನ್ನೇ ಸಲ್ಲಿಸದ ರೈತರ ಖಾತೆಯಿಂದ ಕಾರ್ ಲೋನ್ ಗಾಗಿ ಇಎಂಐ ಕಡಿತಗೊಳಿಸಿದ ಎಸ್ ಬಿಐ!

Update: 2020-07-09 09:10 GMT
Photo: thewire.in

ಜೈಪುರ: ತಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಗಳ ಮೂಲಕ ಕಾರ್ ಲೋನ್‍ ಗಳನ್ನು ಪಡೆದುಕೊಂಡಿರುವುದಕ್ಕಾಗಿ ರಾಜಸ್ಥಾನದ ನೋಹರ್‍ ನಲ್ಲಿನ ಹಲವಾರು ರೈತರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶುಲ್ಕ ವಿಧಿಸಿದೆ. ಆದರೆ, ಈ ರೈತರು ಯಾವತ್ತೂ ಕಾರ್ ಲೋನ್‍ ಗೆ ಅರ್ಜಿಯನ್ನೂ ಸಲ್ಲಿಸಿಲ್ಲ, ಕಾರ್ ಲೋನ್ ಪಡೆದುಕೊಂಡೂ ಇಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ ಎಂದು thewire.in ವರದಿ ಮಾಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರಾಮ್‍ ಗಢ್ ಉಜ್ಜಲ್‍ ವಾಸ್ ಶಾಖೆಯಲ್ಲಿ ಖಾತೆ ಹೊಂದಿರುವ ಹಲವಾರು ರೈತರ ಕಿಸಾನ್ ಕ್ರೆಡಿಟ್ ಕಾರ್ಡ್ ಪಾಸ್‍ ಬುಕ್ ಗಳಲ್ಲಿ Proc Car Loan ಎಂಬುದಾಗಿ ನಮೂದಿಸಲಾಗಿದೆ ಹಾಗೂ ಅದಕ್ಕಾಗಿ 2,000ದಿಂದ 5,000 ರೂ.ವರೆಗಿನ ಮೊತ್ತಗಳನ್ನು ಅವರ ಖಾತೆಗಳಿಂದ ಕಡಿತಗೊಳಿಸಲಾಗಿದೆ ಎಂದು thewire.in ವರದಿ ಮಾಡಿದೆ.

ರೈತರ ಬೆಳೆ ಸಾಲ ಖಾತೆಗಳಲ್ಲಿನ ಈ ಅವ್ಯವಹಾರವನ್ನು ಅಖಿಲ ಭಾರತ ಕಿಸಾನ್ ಸಭಾ ಸದಸ್ಯರು ಪತ್ತೆಹಚ್ಚಿದ್ದಾರೆ. ಅದಕ್ಕೂ ಮೊದಲು ಈ ಬ್ಯಾಂಕ್ ರೈತರ ಬೆಳೆ ಸಾಲಗಳಿಗೆ ಹೆಚ್ಚು ಬಡ್ಡಿ ವಸೂಲಿ ಮಾಡಿರುವುದನ್ನು ಹಾಗೂ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರೀಮಿಯಂನ ರೈತರ ಪಾಲನ್ನು ವಿಮಾ ಕಂಪೆನಿಗಳಿಗೆ ಪಾವತಿ ಮಾಡದಿರುವುದನ್ನು ಪತ್ತೆಹಚ್ಚಲಾಗಿತ್ತು.

ಈ ವರ್ಷದ ಜುಲೈ 2ರಂದು ರಾಮ್‍ ಗಢ ಜಿಲ್ಲೆಯ ರೈತ ಸುಖ್ ದೇವ್ ಬಗೋರಿಯರ ಕಿಸಾನ್ ಕ್ರೆಡಿಟ್ ಖಾತೆಯಿಂದ ರೂ. 1,842.81 ಕಡಿತಗೊಳಿಸಲಾಗಿತ್ತು.

“ಇಂಗ್ಲಿಷ್‍ ನಲ್ಲಿ ನಮೂದಿಸಲಾಗಿರುವ ಎಂಟ್ರಿಗಳು ನಮಗೆ ಅರ್ಥವಾಗವುದಿಲ್ಲ. ಕಾರ್ ಲೋನ್‍ ಗಳಿಗಾಗಿ ಬ್ಯಾಂಕ್ ನಮ್ಮ ಖಾತೆಗಳಿಂದ ಹಣ ಕಡಿತ ಮಾಡಿರುವ ಬಗ್ಗೆ ನಮ್ಮ ಗ್ರಾಮದಲ್ಲಿ ಜನರು ಮಾತನಾಡುತ್ತಿದ್ದರು. ಹಾಗಾಗಿ, ಅದನ್ನು ಪರಿಶೀಲಿಸಲು ನಾನು ನನ್ನ ಪಾಸ್‍ ಬುಕ್ಕನ್ನು ತೆಗೆದುಕೊಂಡು ಹೋದೆ ಹಾಗೂ ಹಣ ಕಡಿತವಾಗಿರುವುದು ಕಂಡುಬಂತು” ಎಂದು ಬಗೋರಿಯ ಹೇಳಿದರು.

2020 ಜನವರಿ 7ರಂದು ನೋಹರ್ ನ ದಿಲ್ಕಿ ಜತನ್ ನಿವಾಸಿಯಾಗಿರುವ ಇನ್ನೋರ್ವ ರೈತ ಶ್ರವಣ್ ಕುಮಾರ್‍ ಖಾತೆಯಿಂದ ಅವರು ಪಡೆಯದ ಕಾರ್ ಲೋನ್‍ ಗಾಗಿ 4,382.34 ರೂ. ಕಡಿತ ಮಾಡಲಾಗಿದೆ. “ನಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ನಮಗೆ ಟ್ರ್ಯಾಕ್ಟರ್ ಅಥವಾ ಇತರ ಯಾವುದೇ ಕೃಷಿ ಉಪಕರಣಗಳನ್ನು ಖರೀದಿಸುವುದೂ ಕಷ್ಟ. ನಾವು ಕಾರು ಖರೀದಿಸುವ ಬಗ್ಗೆ ಯೋಚನೆಯನ್ನಾದರೂ ಹೇಗೆ ಮಾಡಲು ಸಾಧ್ಯ?’’ ಎಂದು ಕುಮಾರ್ ಹೇಳುತ್ತಾರೆ.

ಕೋವಿಡ್-19 ಲಾಕ್‍ ಡೌನ್‍ ನಿಂದಾಗಿ ಹಾಗೂ ಬಳಿಕ ಬೆಲೆ ಕುಸಿತದಿಂದಾಗಿ ಹೆಚ್ಚಿನ ರೈತರು ತಮ್ಮ ಆದಾಯವನ್ನು ಕಳೆದುಕೊಂಡಿದ್ದಾರೆ. ರೈತರ ಖಾತೆಗಳಿಂದ ಕಡಿತ ಮಾಡಲಾಗಿರುವ ಮೊತ್ತವನ್ನು ಅಸಲು ಮೊತ್ತಕ್ಕೆ ಸೇರಿಸಲಾಗುತ್ತದೆ ಹಾಗೂ ರೈತರು ಅದನ್ನು 7 ಶೇಕಡ ಬಡ್ಡಿ ದರದಲ್ಲಿ ಮರು ಪಾವತಿಸಬೇಕಾಗುತ್ತದೆ.

ಕಾರ್ ಲೋನ್ ಕಡಿತ ವಿಷಯವನ್ನು ಎಸ್‍ ಬಿಐ ಗಮನಕ್ಕೆ ತರಲಾಗಿದೆ. ಆದರೆ, ಈವರೆಗೂ ತಮಗೆ ತೃಪ್ತಿದಾಯಕ ಉತ್ತರ ಸಿಕ್ಕಿಲಲ್ಲ ಎಂದು ರೈತರು ಹೇಳಿzದ್ದರೆ.

“ಈ ಶಾಖೆಯು ಹೆಚ್ಚಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಗಳೊಂದಿಗೆ ವ್ಯವಹರಿಸುತ್ತದೆ. ಆದರೆ, ನಮ್ಮ ಮಾತುಗಳನ್ನು ಕೇಳಲು ಅದರ ಅಧಿಕಾರಿಗಳು ಈಗಲೂ ಒಂದು ನಿಮಿಷವನ್ನೂ ನೀಡಲು ಸಿದ್ಧರಾಗಿಲ್ಲ” ಎಂದು ರಾಮ್‍ ಗಢದ ಇನ್ನೋರ್ವ ರೈತ ರಾಜೇಂದ್ರ ಕುಮಾರ್ ಹೇಳುತ್ತಾರೆ.

ಈ ನಡುವೆ, ರೈತರ ಪಾಸ್‍ ಬುಕ್ ‍ಗಳಲ್ಲಿ ಕಾರ್ ಲೋನ್ ನಮೂದಾಗಿರುವುದು ಕೇವಲ ಒಂದು ‘ತಪ್ಪು’ ಎಂದು ಬ್ಯಾಂಕ್ ಹೇಳಿದೆ.

“ಕಾರ್ ಲೋನ್ ಕಂತುಗಳನ್ನು ರೈತರಿಂದ ವಸೂಲಿ ಮಾಡಲಾಗುತ್ತಿಲ್ಲ. ವಾಸ್ತವವಾಗಿ ರೈತರಿಗೆ ವಿಧಿಸಲಾಗಿರುವುದು ಕಿಸಾನ್ ಕ್ರೆಡಿಟ್ ಕಾರ್ಡ್ ‍ನ ವಾರ್ಷಿಕ ನವೀಕರಣದ ಶುಲ್ಕವಾಗಿದೆ. ಆದರೆ, ಅದು ತಪ್ಪಾಗಿ ಕಾರ್ ಲೋನ್ ಎಂದು ನಮೂದಾಗಿದೆ” ಎಂದು ‘ದ ವೈರ್’ ನೊಂದಿಗೆ ಮಾತನಾಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರಾಮ್‍ಗಢ್ ಉಜ್ಜಲ್‍ವಾಸ್ ಶಾಖೆಯ ಉಪ ಮ್ಯಾನೇಜರ್ ನವೀನ್ ಪ್ರಿಯದರ್ಶಿ ಹೇಳಿದರು. ಆದರೆ, ಪಾಸ್‍ ಬುಕ್ ಗಳಲ್ಲಿ ನವೀಕರಣ ಶುಲ್ಕವು ಪ್ರತ್ಯೇಕವಾಗಿ ನಮೂದಾಗಿರುವುದು ಪತ್ತೆಯಾಗಿದೆ.

Writer - ಶ್ರುತಿ ಜೈನ್, thewire.in

contributor

Editor - ಶ್ರುತಿ ಜೈನ್, thewire.in

contributor

Similar News