ಆರ್ಡರ್ ಮಾಡಿದ್ದ ಸ್ಟಾರ್ ಬಕ್ಸ್ ಪಾನೀಯದ ಕಪ್ ನಲ್ಲಿ ‘ಐಸಿಸ್’ ಎಂಬ ಬರಹ: ದೂರು ನೀಡಿದ ಯುವತಿ

Update: 2020-07-09 11:18 GMT

ವಾಷಿಂಗ್ಟನ್ : ಸೈಂಟ್ ಪೌಲ್-ಮಿಡ್‍ವೇ  ಟಾರ್ಗೆಟ್ ಇಲ್ಲಿನ ಸ್ಟಾರ್ ಬಕ್ಸ್ ಕೆಫೆಯಲ್ಲಿ ತಾನು ಆರ್ಡರ್ ಮಾಡಿದ ಪಾನೀಯದ ಕಪ್‍ ನಲ್ಲಿ ತನ್ನ ಹೆಸರು ಬರೆಯುವ ಬದಲು ಅಲ್ಲಿನ ವೈಟ್ರೆಸ್ ‘ಐಸಿಸ್’ ಎಂದು ಬರೆದಿದ್ದಾಳೆ ಎಂದು  ಸೈಂಟ್ ಪೌಲ್ ಮಿನ್ನ್ ಇಲ್ಲಿನ ಮುಸ್ಲಿಂ ಯುವತಿಯೊಬ್ಬಳು ಆರೋಪಿಸಿದ್ದಾಳೆ.

ತನ್ನ ಮೊದಲ ಹೊಸರು ಆಯಿಶಾ ಎಂದಷ್ಟೇ ಹೇಳಿ ತನ್ನನ್ನು ಪರಿಚಯಿಸಿಕೊಂಡಿರುವ ಈ 19 ವರ್ಷದ ಯುವತಿ ತಾನು ಜುಲೈ 1ರಂದು ಕಾಫಿ ಶಾಪ್ ನಲ್ಲಿ ಪಾನೀಯಕ್ಕೆ ಆರ್ಡರ್ ಮಾಡಿದ್ದ ಸಂದರ್ಭ ಹಿಜಾಬ್ ಹಾಗೂ ಮಾಸ್ಕ್  ಧರಿಸಿದ್ದಾಗಿ ಹೇಳಿದ್ದಾಳೆ. ಅಲ್ಲಿನ ವೈಟ್ರೆಸ್ ಗೆ ಹಲವು ಬಾರಿ ತನ್ನ ಹೆಸರನ್ನು ನಿಧಾನವಾಗಿ ಹೇಳಿದ್ದರೂ ಪಾನೀಯ ಆಗಮಿಸುವ ವೇಳೆಗೆ ಕಪ್‍ ನಲ್ಲಿ ‘ಐಸಿಸ್’ ಎಂದು ಬರೆಯಲಾಗಿತ್ತು. ಈ ಕುರಿತಂತೆ ಆಯಿಷಾ ಅಲ್ಲಿನ ಸುಪರ್‍ ವೈಸರ್‍ ನ ಗಮನಕ್ಕೆ ತಂದರೂ ‘ಗ್ರಾಹಕರ ಹೆಸರುಗಳ ವಿಚಾರದಲ್ಲಿ ಕೆಲವೊಮ್ಮೆ ತಪ್ಪುಗಳು ನಡೆಯುತ್ತವೆ’ ಎಂದು ಹೇಳಿದ್ದರೆಂದು ಯುವತಿ  ಮಿನ್ನೆಸೋಟಾ ಮಾನವ ಹಕ್ಕು ಇಲಾಖೆಗೆ ಸಲ್ಲಿಸಿದ ದೂರಿನಲ್ಲಿ ಹೇಳಿದ್ದಾಳೆ.

“ಆಯಿಷಾ ಎನ್ನುವುದು ವಿರಳ ಹೆಸರೇನಲ್ಲ, ಹಲವು ಬಾರಿ ನಾನು ಅವಳಿಗೆ ಹೇಳಿದ್ದೆ, ಅವಳು ಐಸಿಸ್ ಎಂದು ಕೇಳಿರುವ ಸಾಧ್ಯತೆಯೇ ಇಲ್ಲ” ಎಂದು ಹೇಳಿರುವ ಆಕೆ ಅಲ್ಲಿಂದ ತನ್ನನ್ನು ಹೊರ ಕಳುಹಿಸುವ ವೇಳೆ ಬೇರೊಂದು ಪಾನೀಯ ಹಾಗೂ 25 ಡಾಲರ್ ಗಿಫ್ಟ್ ಕಾರ್ಡ್ ಕೂಡ ನೀಡಲಾಯಿತು ಎಂದಿದ್ದಾಳೆ.

ಈ ಘಟನೆಯ ತನಿಖೆ ನಡೆಸಲಾಗಿದ್ದು ಇದು ಉದ್ದೇಶಪೂರ್ವಕ ಕೃತ್ಯವಲ್ಲ. ಬದಲು ಪ್ರಮಾದವಶಾತ್ ತಪ್ಪು ಹಾಗೂ ಹೆಚ್ಚು ಸ್ಪಷ್ಟತೆಯಿದ್ದಲ್ಲಿ ತಪ್ಪಿಸಬಹುದಾಗಿತ್ತು, ಸಂಬಂಧಿತರ ಕುರಿತಂತೆ ಸೂಕ್ತ ಕ್ರಮ, ಹೆಚ್ಚುವರಿ ತರಬೇತಿ ನೀಡಿ ಮುಂದೆ ಇಂತಹ ಪ್ರಮಾದ ನಡೆಯದಂತೆ  ನೋಡಿಕೊಳ್ಳಲಾಗುವುದು ಎಂದು ಸೈಂಟ್ ಪೌಲ್-ಮಿಡ್‍ವೇ  ಟಾರ್ಗೆಟ್ ಹೇಳಿದೆ.

ಸ್ಟಾರ್ ಬಕ್ಸ್ ಈ ಕುರಿತಂತೆ ಪ್ರತಿಕ್ರಿಯಿಸಲು ನಿರಾಕರಿಸಿದರೂ ಸಂಬಂಧಿತ ಉದ್ಯೋಗಿ ಟಾರ್ಗೆಟ್‍ ಗೆ ಸೇರಿದವರು ಹಾಗೂ ಸ್ಟಾರ್ ಬಕ್ಸ್ ಉದ್ಯೋಗಿಯಲ್ಲ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News