ರೈತರಿಂದ ಸಾಲ ವಸೂಲಿಗೆ ಕಿರುಕುಳ ಆರೋಪ: ಜಿಲ್ಲಾ ಕಿಸಾನ್ ಕಾಂಗ್ರೆಸ್‌ನಿಂದ ಜಿಲ್ಲಾಧಿಕಾರಿಗೆ ಮನವಿ

Update: 2020-07-09 12:36 GMT

ಉಡುಪಿ, ಜು.8: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ರೈತರ ರಾಷ್ಟ್ರೀಕೃತ ಬ್ಯಾಂಕು ಹಾಗೂ ಸಹಕಾರಿ ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡಿದ್ದರೂ, ಉಡುಪಿ ಜಿಲ್ಲೆಯ ಹಲವು ಕಡೇ ಸಹಕಾರಿ ಬ್ಯಾಂಕು ಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳು ರೈತರಿಗೆ ಸಾಲ ಮರುಪಾವತಿಸುವಂತೆ ಒತ್ತಡ ಹೇರುತ್ತಿವೆ. ಆದ್ದರಿಂದ ಈ ಬಗ್ಗೆ ಕೂಡಲೇ ಸ್ಪಷ್ಟನೆ ನೀಡಬೇಕೆಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.

ಜಿಲ್ಲೆಯ ರೈತರು ಈಗಾಗಲೇ ಕೊರೋನ ಲಾಕ್‌ಡೌನ್‌ನಿಂದ, ಕೃಷಿ ಕಾರ್ಮಿಕರ ಕೊರತೆಯಿಂದ ಕೃಷಿ ಮಾಡಲು ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ಸಂದರ್ಭದಲ್ಲಿ ಮನ್ನಾ ಮಾಡಿದ ಸಾಲವನ್ನು ಮರುಪಾವತಿಸುವಂತೆ ರೈತರನ್ನು ಪೀಡಿಸುತ್ತಿರುವುದು ಅತ್ಯಂತ ಖಂಡನೀಯ. ಈ ಬಗ್ಗೆ ಜಿಲ್ಲಾಧಿಕಾರಿ ರೈತರ ಮೇಲೆ ಒತ್ತಡ ತರುವ ಬ್ಯಾಂಕ್ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಅದು ಆಗ್ರಹಿಸಿದೆ.

ಜಿಲ್ಲೆಯ ಯಾವುದೇ ರೈತರು ಬ್ಯಾಂಕುಗಳ ಒತ್ತಡದಿಂದ ಭೂಮಿ ಹಡಿಲು ಬಿಟ್ಟಲ್ಲಿ ಅಥವಾ ಆತ್ಮಹತ್ಯೆಯಂಥ ಪ್ರಕರಣಗಳು ನಡೆದರೆ, ಇದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗುತ್ತದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಜಿಲ್ಲೆಯ ರೈತರಿಗೆ ತೊಂದರೆ ಯಾಗದಂತೆ ಆದೇಶ ನೀಡಬೇಕೆಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಎಲ್ಲೂರು ಶಶಿಧರ ಶೆಟ್ಟಿ, ಉಪಾಧ್ಯಕ್ಷ ಶೇಖರ್ ಕೋಟ್ಯಾನ್ ಉದ್ಯಾವರ, ಕಿಸಾನ್ ಕಾಂಗ್ರೆಸ್ ರಾಜ್ಯ ಸಮಿತಿ ಸದಸ್ಯ ನಾಗಪ್ಪಕೊಟ್ಟಾರಿ ವಂಡ್ಸೆ, ರಾಯ್ ಮಾರ್ವಿನ್ ಫೆನಾರ್ಂಡೀಸ್ ಉಡುಪಿ, ಉದಯ ಶೆಟ್ಟಿ ಕಾರ್ಕಳ, ಪ್ರಭಾಕರ ನಾಯ್ಕಿ ಬೈಂದೂರು ಮನವಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News