ಉಡುಪಿ: ಬಾಲಕಿಯ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ 20 ವರ್ಷ ಜೈಲು

Update: 2020-07-09 12:54 GMT
ಸಾಂದರ್ಭಿಕ ಚಿತ್ರ

ಉಡುಪಿ, ಜು.9: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳಿಗೆ ಉಡುಪಿಯ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ವಾಸದ ಶಿಕ್ಷೆ ಹಾಗೂ 60 ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದೆ.

ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯ ತಾಯಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದಾಖಲಿಸಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಆರಕ್ಷಕ ನಿರೀಕ್ಷಕರು ತನಿಖೆ ನಡೆಸಿ ಆರೋಪಿಗಳಾದ ಗ್ಲೆನ್ ಜೆಫ್ರಿ ಮಥಾಯಸ್ ಹಾಗೂ ಸುಹೇಲ್ ಎಂ. ಎಂಬವರನ್ನು ಬಂಧಿಸಿದ್ದರು.

ಆರೋಪಿಗಳು 2017ರ ಜೂ.29ರಂದು ಬಾಲಕಿಯನ್ನು ಮಣಿಪಾಲದ ಸಿಂಡಿಕೇಟ್ ಸರ್ಕಲ್‌ಗೆ ಬರಹೇಳಿ ಅಲ್ಲಿಂದ ಅರ್ಭಿ ಪಾಲ್ಸ್‌ಗೆ ಕರೆದೊಯ್ದು ಬಲವಂತವಾಗಿ ಮದ್ಯಪಾನ ಮಾಡಿಸಿ ಮಣಿಪಾಲದ ವಸತಿಗೃಹವೊಂದರಲ್ಲಿ ರೂಮ್ ಮಾಡಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಆಗಿನ ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕ ಸುದರ್ಶನ್ ಎಂ. ಅವರು ಆರೋಪಿಗಳ ವಿರುದ್ಧ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಅದರಂತೆ ವಿಚಾರಣೆ ನಡೆದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಫೊಕ್ಸೋ ವಿಶೇಷ ನ್ಯಾಯಾಲಯ) ನ್ಯಾಯಾಧೀಶೆಯಾದ ಯಾದವ ವನಮಾಲ ಆನಂದರಾವ್ ಅವರು ಅಭಿಯೋಜನೆ ಪರವಾಗಿ ಹಾಜರು ಪಡಿಸಿದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆರೋಪಿಗಳು ತಪ್ಪಿತಸ್ಥರೆಂದು ತೀರ್ಪು ನೀಡಿ ಕಠಿಣ ಕಾರಾಗೃಹ ವಾಸ ಹಾಗೂ ಭಾರೀ ದಂಡವನ್ನು ವಿಧಿಸಿದರು.

ಸರಕಾರದ ಪರವಾಗಿ ಉಡುಪಿ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕರಾದ ವೈ.ಟಿ.ರಾಘವೇಂದ್ರ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News