ಚಾರ್ಮಾಡಿ ಘಾಟ್‌ನಲ್ಲಿ ರಾತ್ರಿ ಸಂಚಾರ ನಿಷೇಧ

Update: 2020-07-09 13:24 GMT

ಮಂಗಳೂರುಮ, ಜು.9: ರಾಷ್ಟ್ರೀಯ ಹೆದ್ದಾರಿ 73ರ ಮಂಗಳೂರು- ವಿಲ್ಲುಪುರಂ ರಸ್ತೆಯ 76ನೇ ಕಿ.ಮೀ.ನಿಂದ 86.20 ಕಿ.ಮೀ.ವರೆಗಿನ ಚಾರ್ಮಾಡಿ ಘಾಟ್‌ನಲ್ಲಿ ಜು.9ರಿಂದ ಪ್ರತಿದಿನ ಸಂಜೆ 7ರಿಂದ ಬೆಳಗ್ಗೆ 7ಗಂಟೆಯವರೆಗೆ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಗೊಳಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಗುರುವಾರ ಆದೇಶ ಹೊರಡಿಸಿದ್ದಾರೆ.

ಘಾಟ್‌ನಲ್ಲಿ ಮಣ್ಣು ಕುಸಿಯುವ ಸಾಧ್ಯತೆ ಇದೆ. ರಸ್ತೆಯ ಪಕ್ಕದಲ್ಲಿ ತಡೆಗೋಡೆಗಳು ಇಲ್ಲದೆ, ಮಂಜು ಕವಿದು ಚಾಲಕರಿಗೆ ದಾರಿ ಕಾಣದೆ ಅಪಘಾತಗಳಾಗುವ ಸಾಧ್ಯತೆ ಹೆಚ್ಚು ಇದೆ. ಘಾಟ್‌ನಲ್ಲಿ ವಾಹನಗಳ ನಿರ್ಬಂಧವು ಅನಿವಾರ್ಯವಾಗಿದೆ. ಜು.9ರಿಂದ ಮುಂದಿನ ಆದೇಶದವರೆಗೂ ಪ್ರತಿದಿನ ಸಂಜೆ 7ರಿಂದ ಬೆಳಗ್ಗೆ 7ಗಂಟೆಯವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಇನ್ನುಳಿದಂತೆ 2019ರ ನವೆಂಬರ್ 27ರ ಹಾಗೂ 2019ರ ಡಿಸೆಂಬರ್ 27ರ ಆದೇಶಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಈ ಮಾರ್ಗದಲ್ಲಿ ಆ್ಯಂಬುಲೆನ್ಸ್‌ಗಳಿಗೆ ಮಾತ್ರ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ.
ಈ ಅಧಿಸೂಚನೆಯ ಅನ್ವಯ ರಸ್ತೆಯಲ್ಲಿ ಅಗತ್ಯ ಸೂಚನಾಫಲಕ ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿ ನೇಮಕಗೊಳಿಸಲು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News