ಮಂಗಳೂರು: ​ದಣಿವರಿಯದ ವೃದ್ಧನಿಂದ ಭತ್ತದ ಬೇಸಾಯ

Update: 2020-07-09 13:31 GMT

ಮಂಗಳೂರು, ಜು.9: ಕೃಷಿಯಲ್ಲಿ ಯುವಜನರಿಗೆ ಮಾದರಿ ಗುರುಪುರ ಕೆದುಬರಿ ಗುರುವಪ್ಪಣ್ಣ. ಕಂಬಳ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಪಡೆದಿರುವ ಇವರು, ತನ್ನ ಬದುಕಿನ 85ರ ಆಸುಪಾಸಿನಲ್ಲೂ ಗದ್ದೆ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಇವರಿಗೆ ಕಂಬಳ ಅಚ್ಚುಮೆಚ್ಚಿನ ಹವ್ಯಾಸವಾಗಿದ್ದರೆ, ಕೃಷಿ ಪ್ರೀತಿಯ ಕಾಯಕವಾಗಿದೆ. ಜೊತೆಗೆ ಹೈನುಗಾರಿಕೆಯಲ್ಲೂ ಸೈ ಎನಿಸಿಕೊಂಡಿದ್ದಾರೆ.

ನಗರದ ಹೊರವಲಯ ಗುರುಪುರದಲ್ಲಿ ಕಳೆದ ಕೆಲವು ವರ್ಷದಿಂದ ತನ್ನಲ್ಲಿರುವ ಒಂದಷ್ಟು ಗದ್ದೆ ಪ್ರದೇಶದ ಜೊತೆಗೆ ಗೇಣಿಗೆ (ಲೀಸ್) ಪಡೆದ ಏಳೆಂಟು ಎಕ್ರೆ ಗದ್ದೆಯಲ್ಲಿ ಭತ್ತದ ಕೃಷಿ ಮಾಡುತ್ತಿದ್ದಾರೆ. ಇವರು ಈಗಲೂ ಟಿಲ್ಲರ್ ಹಾಗೂ ಎತ್ತುಗಳಿಂದ ಗದ್ದೆಯಲ್ಲಿ ಉಳುಮೆ ಮಾಡುತ್ತಾರೆ. ಗದ್ದೆ, ಭತ್ತ, ಎತ್ತು, ಕಂಬಳ ಎಂದರೆ ಅತೀವ ಪ್ರೀತಿ ತೋರಿಸುವ ಗುರುವಪ್ಪ ದಣಿವರಿಯದ ಕೃಷಿಕ ಎಂದರೆ ತಪ್ಪಾಗಲಾರದು.

ಗುರುಪುರ ಆಸುಪಾಸಿನಲ್ಲಿ ಗೇಣಿಗೆ ಪಡೆದ ಮೂರು ಎಕ್ರೆ ಜಾಗದಲ್ಲಿ ಈಗ ‘ಎಣೆಲ್’ ಭತ್ತದ ಬೆಳೆಗೆ ನಾಟಿ ಮಾಡುತ್ತಿರುವ ಇವರು, ಮುಂದಿನ ‘ಕೊಳಕೆ’ ಸಾಗುವಳಿ ಸೀಸನ್‌ನಲ್ಲಿ ಇನ್ನೂ ನಾಲ್ಕು ಎಕ್ರೆ ಜಾಗದಲ್ಲಿ ಭತ್ತದ ಬೇಸಾಯ ಮಾಡಲು ಉತ್ಸುಕರಾಗಿದ್ದಾರೆ.

‘ಹಿಂದೆ ಸ್ಥಳೀಯ ಮಹಿಳೆಯರು ಭತ್ತದ ನಾಟಿ, ಕೊಯ್ಲಿಗೆ ಸಿಗುತ್ತಿದ್ದರು. ಆದರೆ ಈಗ ದೂರದ ಮುಚ್ಚೂರಿನ ಕೊಂಪದವಿನಿಂದ ಕೂಲಿ ಮಹಿಳೆಯರನ್ನು ಕರೆಸಿಕೊಳ್ಳುವಂತಾಗಿದೆ. ಇವರಿಗೆ ದಿನಕ್ಕೆ ಊಟ, ಚಾಹ-ತಿಂಡಿ ಸಹಿತ ಸಂಜೆ 325 ರೂ. ಕೂಲಿ ಹಾಗೂ ಟೆಂಪೋ ಬಾಡಿಗೆ 1,100 ರೂ. ಕೊಡುತ್ತೇನೆ. ಭತ್ತದ ಬೇಸಾಯದಲ್ಲಿ ಈಗ ಒಟ್ಟು ಖರ್ಚಿನ ಬಳಿಕ ಬೆಳೆಗಾರರಿಗೆ ಒಂದಷ್ಟು ಲಾಭ ಬರುತ್ತದೆ’ ಎಂದು ಕೆದುಬರಿ ಗುರುವಪ್ಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News