ಉಡುಪಿ ಜಿಲ್ಲೆಯಲ್ಲಿ ಗುರುವಾರ 22 ಮಂದಿಗೆ ಕೊರೋನ ಸೋಂಕು ದೃಢ

Update: 2020-07-09 15:24 GMT
ಸಾಂದರ್ಭಿಕ ಚಿತ್ರ

ಉಡುಪಿ, ಜು.9: ಜಿಲ್ಲೆಯ 22 ಮಂದಿಯಲ್ಲಿ ಗುರುವಾರ ನೋವೆಲ್ ಕೊರೋನ ವೈರಸ್ (ಕೋವಿಡ್-19) ಸೋಂಕು ಪತ್ತೆಯಾಗಿದೆ. ಶಂಕಿತರ ಗಂಟಲುದ್ರವ ಮಾದರಿಯ ಪರೀಕ್ಷೆಯಲ್ಲಿ ಇಂದು 22 ಮಂದಿ ಸೋಂಕಿಗೆ ಪಾಸಿಟಿವ್ ಆಗಿದ್ದರೆ 843 ಮಂದಿಯ ಮಾದರಿ ನೆಗೆಟಿವ್ ಫಲಿತಾಂಶವನ್ನು ನೀಡಿದೆ. ಗುರುವಾರ ಇನ್ನೂ 218 ಮಂದಿಯ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಈ ದಿನ ಪಾಸಿಟಿವ್ ಬಂದ 22 ಮಂದಿಯಲ್ಲಿ ಒಬ್ಬರು ಮಾತ್ರ ಮಹಾರಾಷ್ಟ್ರದಿಂದ ಬಂದಿದ್ದು, ಉಳಿದವರಲ್ಲಿ 12 ಮಂದಿ ಕರ್ನಾಟಕದ ಉಳಿದ ಜಿಲ್ಲೆಗಳಿಂದ ಉಡುಪಿಗೆ ಆಗಮಿಸಿದವರಾಗಿದ್ದಾರೆ. ಇವರಲ್ಲಿ ಒಬ್ಬರು ಚಿಕ್ಕಮಗಳೂರು, ಐವರು ದಕ್ಷಿಣ ಕನ್ನಡ ಹಾಗೂ ಆರು ಮಂದಿ ಬೆಂಗಳೂರಿನಿಂದ ಆಗಮಿಸಿದವರಿಗೆ ಇಲ್ಲಿ ಪಾಸಿಟಿವ್ ಬಂದಿದೆ. ಇನ್ನುಳಿದ 9 ಮಂದಿಯೂ ಜಿಲ್ಲೆಯಲ್ಲಿ ಈಗಾಗಲೇ ಪಾಸಿಟಿವ್ ಬಂದವರ ಸ್ಥಳೀಯ ಪ್ರಾಥಮಿಕ ಸಂಪರ್ಕದಿಂದ ಸೋಂಕು ಬಾಧಿತರಾಗಿದ್ದಾರೆ ಎಂದು ಡಾ.ಸೂಡ ವಿವರಿಸಿದರು.

ಸೋಂಕಿತರಲ್ಲಿ ಉಡುಪಿ ತಾಲೂಕಿನ ಐವರು, ಕುಂದಾಪುರ ತಾಲೂಕಿನ 10 ಮಂದಿ ಹಾಗೂ ಕಾರ್ಕಳ ತಾಲೂಕಿನ ಏಳು ಮಂದಿ ಸೇರಿದ್ದಾರೆ. 11 ಮಂದಿ ಪುರುಷರು, 10 ಮಹಿಳೆಯರು ಹಾಗೂ ಒಬ್ಬ ಬಾಲಕಿಗೆ ಪಾಸಿಟಿವ್ ಬಂದಿದೆ. ಗುರುವಾರ 22 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 1443ಕ್ಕೇರಿದೆ.

28 ಮಂದಿ ಗುಣಮುಖ:  ಜಿಲ್ಲೆಯಲ್ಲಿ ಪಾಸಿಟಿವ್‌ಗೆ ಚಿಕಿತ್ಸೆ ಪಡೆದು ಗುಣಮುಖರಾದ 28 ಮಂದಿ ಇಂದು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆಯಿಂದ 11 ಮಂದಿ, ಕುಂದಾಪುರದ ಸರಕಾರಿ ಆಸ್ಪತ್ರೆಯಿಂದ 10 ಮಂದಿ ಹಾಗೂ ಕಾರ್ಕಳ ಆಸ್ಪತ್ರೆಯಿಂದ 7 ಮಂದಿ ಇಂದು ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 1219ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 223 ಮಂದಿ ಜಿಲ್ಲೆಯಲ್ಲಿ ಇನ್ನೂ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ.

ಸೋಂಕಿನ ಪರೀಕ್ಷೆಗಾಗಿ ಗುರುವಾರ ಇನ್ನೂ 218 ಮಂದಿಯ ಗಂಟಲು ದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು 9 ಮಂದಿ ಇದ್ದರೆ, ಕೋವಿಡ್ ಸಂಪರ್ಕಿತರು 95 ಮಂದಿ, ಉಸಿರಾಟ ತೊಂದರೆಯ 10 ಮಂದಿ, ಶೀತಜ್ವರದಿಂದ ಬಳಲುವ 49 ಮಂದಿ ಹಾಗೂ ದೇಶದ ವಿವಿಧ ರಾಜ್ಯಗಳ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದ 55 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.

ಇಂದು ಪಡೆದ ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 20,711ಕ್ಕೇರಿದೆ. ಇವುಗಳಲ್ಲಿ ಈವರೆಗೆ 16,835 ನೆಗೆಟಿವ್, 1443 ಪಾಸಿಟಿವ್ ಬಂದಿವೆ. ಮೂವರು ಮೃತಪಟ್ಟಿದ್ದಾರೆ. ಇನ್ನು ಒಟ್ಟು 2433 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ. ಇಂದು 24 ಮಂದಿ ಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ಮೂವರು ಕೋವಿಡ್ ಶಂಕಿತರು, 7 ಮಂದಿ ಉಸಿರಾಟ ತೊಂದರೆಯವರು ಹಾಗೂ 14 ಮಂದಿ ಶೀತಜ್ವರದಿಂದ ಬಳಲುವರು ಸೇರಿದ್ದಾರೆ ಎಂದರು.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗಳಿಂದ ಇಂದು 21 ಮಂದಿ ಬಿಡುಗಡೆಗೊಂಡಿದ್ದು, 145 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಕೊರೋನ ಸೋಂಕಿನ ಗುಣಲಕ್ಷಣದ 38 ಮಂದಿ ಸೇರಿದಂತೆ ಒಟ್ಟು 6110 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 1235 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸೂಡ ಹೇಳಿದರು.

ಸೀಲ್‌ಡೌನ್: ಇಂದು ಕೋಟ ಹೋಬಳಿಯ ಮಣೂರು ಪಡುಕೆರೆಯ ನರ್ಸ್ ಒಬ್ಬರಲ್ಲಿ ಕೊರೋನ ಸೋಂಕಿನ ಪಾಸಿಟಿವ್ ಕಂಡುಬಂದಿದ್ದು, ಅಧಿಕಾರಿಗಳು ಈ ಮನೆಯನ್ನು ಸೀಲ್‌ಡೌನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿರುವ ಇವರನ್ನು ಕೊರೋನ ಸೋಂಕಿಗಾಗಿ ಪರೀಕ್ಷೆಗೊಳಪಡಿಸಿದಾಗ ಅವರಲ್ಲಿ ಪಾಸಿಟಿವ್ ಕಂಡುಬಂದಿದ್ದು, ಇದೀಗ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ನಿತ್ಯ ಬಂದು ಹೋಗುತಿದ್ದ ಮಣೂರು ಪಡುಕೆರೆ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.

ಬೈಂದೂರು 2, ಕುಂದಾಪುರ 3: ಕುಂದಾಪುರ ತಾಲೂಕಿನಲ್ಲಿ ಒಟ್ಟು ಮೂರು ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಕುಂದಾಪುರದ ಎರಡು ಹಾಗೂ ತ್ರಾಸಿಯ ಒಂದು ಮನೆಯನ್ನು ನಿರ್ಬಂಧಕ್ಕೊಳಪಡಿಸಲಾಗಿದೆ. ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದು ಪಾಸಿಟಿವ್ ಕಂಡುಬಂದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅದೇ ರೀತಿ ಬೈಂದೂರು ತಾಲೂಕಿನಲ್ಲೂ ಎರಡು ಕಡೆ ಸೀಲ್‌ಡೌನ್ ಮಾಡಲಾಗಿದೆ ಎಂದು ತಹಶೀಲ್ದಾರ್ ಬಸಪ್ಪ ತಿಳಿಸಿದ್ದಾರೆ. ಕೊಲ್ಲೂರು ಮತ್ತು ಉಪ್ಪುಂದದಲ್ಲಿ ಮಹಾರಾಷ್ಟ್ರದಿಂದ ಬಂದ ಇಬ್ಬರಲ್ಲಿ ಇಂದು ಸೋಂಕು ದೃಢಪಟ್ಟಿದ್ದು, ಅವರ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಹಾಗೂ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗುತ್ತಿದೆ ಎಂದವರು ತಿಳಿಸಿದರು.

ಉಡುಪಿ 2 ಕಡೆ: ಮಣಿಪಾಲ ಖಾಸಗಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಯೊಬ್ಬರಿಗೆ ಇಂದು ಕೊರೋನ ಸೋಂಕು ದೃಢಪಟ್ಟಿದೆ. ಪರ್ಕಳ ಶೆಟ್ಟಿಬೆಟ್ಟಿನ 52ರ ಹರೆಯದ ಈ ಮಹಿಳೆಯ ಬಾಡಿಗೆ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅದೇ ರೀತಿ ಪೆರಂಪಳ್ಳಿಯ 27ರ ಹರೆಯದ ಯುವಕನಲ್ಲೂ ಪಾಸಿಟಿವ್ ಕಂಡುಬಂದಿದ್ದು, ಆತನ ವಸತಿಗೃಹದ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಆತ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಆಸ್ಪತ್ರೆಯ ಉದ್ಯೋಗಿ ಎಂದು ಹೇಳಲಾಗಿದೆ.

ಕತರ್‌ನಿಂದ ಬಂದ ವ್ಯಕ್ತಿಗೆ ಪಾಸಿಟಿವ್
ಇತ್ತೀಚೆಗೆ ಕತರ್‌ನಿಂದ ಬಂದು ಬೆಂಗಳೂರಿನಲ್ಲಿ ಕ್ವಾರಂಟೈನ್‌ನಲ್ಲಿರುವ ಹೆಜಮಾಡಿಕೋಡಿಯ 53 ವರ್ಷ ಪ್ರಾಯದ ವ್ಯಕ್ತಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಅವರ ಗಂಟಲುದ್ರವ ಮಾದರಿಯ ಪರೀಕ್ಷೆಯಲ್ಲಿ ಇದು ದೃಢಪಟ್ಟಿದೆ.
ಅವರು ಕತರ್‌ನಿಂದ ಬೆಂಗಳೂರಿಗೆ ಬಂದು ಅಲ್ಲೇ ಕ್ವಾರಂಟೈನ್‌ನಲ್ಲಿದ್ದ ಸಂದರ್ಭ ಸೋಂಕು ದೃಢಪಟ್ಟ ಕಾರಣ, ಅವರಿಗೆ ಬೆಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಐದನೇ ಸ್ಥಾನಕ್ಕೆ ಇಳಿದ ಉಡುಪಿ
ರಾಜ್ಯದ ಕೋವಿಡ್-19 ಸೋಂಕಿತರ ಪಟ್ಟಿಯಲ್ಲಿ ಕಳೆದ ತಿಂಗಳು ಒಮ್ಮಿಂದೊಮ್ಮೆಗೆ ಅಗ್ರಸ್ಥಾನಕ್ಕೇರಿದ್ದ ಉಡುಪಿ, ಬಳಿಕ ಎರಡನೇ ಸ್ಥಾನಕ್ಕಿಳಿದಿತ್ತು. ಆದರೆ ಎರಡು ವಾರಗಳಿಂದ ಮೂರನೇ ಸ್ಥಾನದಲ್ಲಿದ್ದ ಉಡುಪಿ ಜಿಲ್ಲೆ ಇದೀಗ ಐದನೇ ಸ್ಥಾನಕ್ಕೆ ಇಳಿದಿದೆ.

ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಇಂದಿನ ಕೋವಿಡ್-19ರ ಪಟ್ಟಿಯಲ್ಲಿ ಬೆಂಗಳೂರು ನಗರ ಗುರುವಾರ 1373 ಪ್ರಕರಣಗಳೊಂದಿಗೆ ಒಟ್ಟು 13,882 ಸೋಂಕಿತರನ್ನು ಹೊಂದಿ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದೆ. ಕಲಬುರಗಿ 1901 ಕೇಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ 1701 ಪ್ರಕರಣಗಳೊಂದಿಗೆ ಮೂರನೇ ಸ್ಥಾನಕ್ಕೇರಿದೆ. ಬಳ್ಳಾರಿ 1488ರೊಂದಿಗೆ ನಾಲ್ಕನೇ, ಉಡುಪಿ 1442 ಪಾಸಿಟಿವ್‌ನೊಂದಿಗೆ ಐದನೇ ಸ್ಥಾನದಲ್ಲಿದೆ.

ಯಾದಗಿರಿ 1043 ಕೇಸು ಹಾಗೂ ಬೀದರ್ 894 ಪ್ರಕರಣಗಳೊಂದಿಗೆ ಆರು ಮತ್ತು ಏಳನೇ ಸ್ಥಾನದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News