ಕಾರವಾರ: ಭಾರೀ ಮಳೆ; ಹಲವು ಗ್ರಾಮಗಳು ಜಲಾವೃತ

Update: 2020-07-09 15:10 GMT

ಕಾರವಾರ, ಜು.9: ಜಿಲ್ಲೆಯ ಕರಾವಳಿಯಲ್ಲಿ ಗುರುವಾರ ಭಾರೀ ಮಳೆ ಸುರಿಯುತ್ತಿದ್ದು ಕಾರವಾರ-ಅಂಕೋಲಾದ ಭಾಗದ ಅನೇಕ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು ಗುಡ್ಡದಿಂದ ಮಳೆ ನೀರುವ ಹರಿದು ಬಂದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಹಳ್ಳದಂತಾಗಿ ಸಂಚಾರಕ್ಕೆ ವ್ಯತ್ಯಯವಾಗಿದೆ. 

ಎರಡು ದಿನಗಳಿಂದ ಸತತ ಮಳೆಯಾಗುತ್ತಿದ್ದರಿಂದ ಕಾರವಾರ ತಾಲೂಕಿನ ಅಮದಳ್ಳಿ ಗ್ರಾಪಂ ವ್ಯಾಪ್ತಿಯ ಮುದಗಾ ಬಳಿ ಗುಡ್ಡದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದು ರಾಷ್ಟ್ರೀಯ ಹೆದಾರಿ ಸಂಪೂರ್ಣ ಬಂದ್ ಆಗಿತ್ತು. ಐಆರ್ಬಿಯ ಕಾಮಗಾರಿ ಅವೈಜ್ಞಾನಿಕವಾಗಿ ನಡೆಸಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ ಎಂದು ಆರೋಪಿಸಲಾಗಿದೆ. 

ತಾಲೂಕಿನ ಬರ್ಗಲ್, ಬಾಳೆರಾಶಿ, ಮುದಗಾ, ಕದ್ರಾ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಮಳೆ ನೀರು ಉಕ್ಕಿ ಬರುತ್ತಿದ್ದಂತೆ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅಮದಳ್ಳಿಯ ರಾಷ್ಟ್ರಿಯ ಹೆದ್ದಾರಿ ಸಂಪೂರ್ಣ ಬಂದ್ ಆಗಿ ಹೆದ್ದಾರಿಯಲ್ಲಿ ಸುಮಾರು 3 ಅಡಿಗೂ ಹೆಚ್ಚಿನ ನೀರು ಭರ್ತಿಯಾಗಿದ್ದು ಹಳ್ಳಕ್ಕೆ ಇರುವ ಕಿರು ಸೇತುವೆಯ ಮೇಲಿನಿಂದಲೂ ನೀರು ರಭಸವಾಗಿ ಹರಿಯುತ್ತಿತ್ತು. 

ಅಲ್ಲದೇ ಮುದಗಾದಿಂದ ಅಮದಳ್ಳಿಯವರೆಗೂ ನೀರು ಸಂಗ್ರಹವಾಗಿದ್ದು ಪ್ರಸಿದ್ಧ ಶ್ರೀವೀರಗಣಪತಿ ದೇವಸ್ಥಾನಕ್ಕೆ ನೀರು ನುಗ್ಗುವ ಆತಂಕ ಎದುರಾಗಿದೆ. 

ತಾಲೂಕಿನ ಕದ್ರಾದಲ್ಲಿ ಸ್ಥಳೀಯರ ಜನ ವಸತಿ ಪ್ರದೇಶ ಜಲಾವೃತಗೊಂಡಿದೆ.ಬರ್ಗಲ್ ಬಳಿ ಭಾರೀ ಪ್ರಮಾಣದಲ್ಲಿ ನೀರು ತುಂಬಿಸಿದ್ದರಿಂದ ಅನೇಕ ಮನೆಗಳಿಗೆ ಮಳೆ ನೀರು ತುಂಬಿತ್ತು. ಮಾರ್ಗಮಧ್ಯೆ ಇರುವ ಸೇತುವೆ ಮೇಲಿನಿಂದ ನೀರು ಹರಿದಿದೆ. ಇದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗಿತ್ತು. 

ಟ್ರಾಫಿಕ್ ಜಾಮ್: ಮುದಗಾದಲ್ಲಿ ನೀರು ಭರ್ತಿಯಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಂದಿದ್ದು, ಎರಡೂ ಕಡೆಗಳಲ್ಲಿ ಸುಮಾರು 2 ಕಿ.ಮೀ. ಗೂ ಅಧಿಕ ವಾಹನಗಳ ಸಾಲು ಉಂಟಾಗಿತ್ತು.

ಹಾನಿ: ಸುರಿದ ಭಾರೀ ಪ್ರಮಾಣದ ಮಳೆಗೆ ತಾಲೂಕಿನಲ್ಲಿ 4 ಮನೆಗಳಿಗೆ ಹಾನಿ ಉಂಟಾಗಿದೆ. 126 ಮನೆಗಳಿಗೆ ನೀರು ನುಗ್ಗಿದೆ. ಬಾಡ, ಬಿಣಗಾದಲ್ಲಿ ಸಾವಂತವಾಡದಲ್ಲಿ ಹಾಗೂ ಚಿತ್ತಾಕುಲದಲ್ಲಿ ತಲಾ ಒಂದೊಂದು ಮನೆಗಳು ಭಾಗಷಃ ಹಾನಿಗೊಳಗಾಗಿವೆ. ಅಮದಳ್ಳಿಯಲ್ಲಿ 90, ತೋಡೂರಿನಲ್ಲಿ 20, ಕಿನ್ನರದಲ್ಲಿ 6, ಬರಗಲ್ ನಲ್ಲಿ 6, ಘೋಪಿಷಟ್ಟಾದಲ್ಲಿ 1 ಹಾಗೂ ಘಟಸಾಯಿ ಗ್ರಾಮದ ಗೋಟೆಗಾಳಿಯಲ್ಲಿ 3 ಮನೆಗಳಿಗೆ ನೀರು ನುಗ್ಗಿದೆ ಎಂದು ತಹಶೀಲ್ದಾರ್ ಆರ್ ವಿ ಕಟ್ಟಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News