ಉಯಿಘರ್ ಮುಸ್ಲಿಮರ ವಿರುದ್ಧ ದೌರ್ಜನ್ಯ ಎಸಗಿದ ಚೀನಿ ಅಧಿಕಾರಿಗಳ ವೀಸಾ ನಿಷೇಧ, ಆಸ್ತಿ ಮುಟ್ಟುಗೋಲು

Update: 2020-07-10 18:12 GMT

ಬೀಜಿಂಗ್, ಜು.10: ಚೀನಾದಲ್ಲಿ ಅಲ್ಪಸಂಖ್ಯಾತ ಉಯಿಘರ್ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯದಲ್ಲಿ ಪಾತ್ರ ವಹಿಸಿರುವ ಚೀನಿ ಅಧಿಕಾರಿಗಳ ವಿರುದ್ಧ ಅಮೆರಿಕವು ನಿರ್ಬಂಧಗಳನ್ನು ವಿಧಿಸಿರುವುದಕ್ಕೆ ಬೀಜಿಂಗ್ ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಚೀನಾದಲ್ಲಿ ಉಯಿಘರ್ ಮುಸ್ಲಿಮರ ವಿರುದ್ಧ ಬೀಜಿಂಗ್ ಕೈಗೊಳ್ಳುತ್ತಿರುವ ಕಠಿಣಕ್ರಮಗಳ ಸೂತ್ರಧಾರಿ ಹಾಗೂ ಕ್ಸಿನ್ಜಿಯಾಂಗ್ ಪ್ರಾಂತದ ಕಮ್ಯೂನಿಸ್ಟ್ ಪಕ್ಷದ ವರಿಷ್ಠ ಚೆನ್ ಖ್ವಾನ್ಕ್ವೊ ಸೇರಿದಂತೆ ಮೂವರು ಅಧಿಕಾರಿಗಳ ವೀಸಾಗಳನ್ನು ನಿಷೇಧಿಸುವುದಾಗಿ ಹಾಗೂ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕುವುದಾಗಿ ಅಮೆರಿಕ ಘೋಷಿಸಿದ ಬೆನ್ನಲ್ಲೇ ಚೀನಾ ಈ ಪ್ರತಿಕ್ರಿಯೆ ನೀಡಿದೆ.

‘‘ಅಮೆರಿಕದ ಕೃತ್ಯಗಳು ಚೀನಾದ ಆಂತರಿಕ ವ್ಯವಹಾರಗಳ ಮೇಲೆ ಗಂಭೀರವಾಗಿ ಹಸ್ತಕ್ಷೇಪ ನಡೆಸುತ್ತಿವೆ ಹಾಗೂ ಅಂತಾರಾಷ್ಟ್ರೀಯ ಸಂಬಂಧಗಳ ಮೂಲಭೂತ ಸಂಪ್ರದಾಯಗಳನ್ನು ಗಂಭೀರವಾಗಿ ಉಲ್ಲಂಘಿಸುತ್ತಿವೆ “ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಝಿಯಾನ್ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

“ಕ್ಸಿನ್ಜಿಯಾಂಗ್ (ಉಯಿಘರ್ ಮುಸ್ಲಿಮರು ಅತ್ಯಧಿಕ ಸಂಖ್ಯೆಯಲ್ಲಿರುವ  ರಾಜ್ಯ) ಸಂಬಂಧಿಸಿದ ವಿಷಯಗಳ ಬಗ್ಗೆ ಕೆಟ್ಟದಾಗಿ ವರ್ತಿಸುತ್ತಿರುವ ಅಮೆರಿಕದ ಸಂಸ್ಥೆಗಳು ಹಾಗೂ ವ್ಯಕ್ತಿಗಳು ವಿರುದ್ಧ ಪ್ರತಿ ಕ್ರಮಗಳನ್ನು ಹೇರಲು ಚೀನಾ ನಿರ್ಧರಿಸಿದೆ’’ ಎಂದು ಝಾವೊ ತಿಳಿಸಿದ್ದಾರೆ. ಆದರೆ ಯಾವ ರೀತಿಯ ನಿರ್ಬಂಧಗಳನ್ನು ವಿಧಿಸಲಾಗುವುದು ಎಂಬ ಬಗ್ಗೆ ವಿವರಗಳನ್ನು ಅವರು ನೀಡಲಿಲ್ಲ.

ಉಯಿಘರ್ ಮುಸ್ಲಿಮರನ್ನು ಜೀತದ ದುಡಿಮೆಗೆ ಬಳಸಲಾಗುತ್ತದೆ, ಅವರನ್ನು ಸಾಮೂಹಿಕವಾಗಿ ಬಂಧನದಲ್ಲಿಡಲಾಗುತ್ತಿದೆ ಹಾಗೂ ಬಲವಂತವಾಗಿ ಗರ್ಭಪಾತ ಮಾಡಿಸಲಾಗುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಗುರುವಾರ ಆರೋಪಿಸಿದ್ದರು. ಕ್ಸಿನ್ಜಿಯಾಂಗ್ ನಲ್ಲಿ ಉಯಿಘರ್ ಮುಸ್ಲಿಮರ ಮೇಲೆ ನಡೆಯತ್ತಿರುವ ಭಯಾನಕ ಹಾಗೂ ವ್ಯವಸ್ಥಿತವಾದ ದೌರ್ಜನ್ಯಗಳ ವಿರುದ್ಧ ಅಮೆರಿಕವು ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದರು.

 ಕ್ಸಿನ್ಜಿಯಾಂಗ್ ಪ್ರಾಂತದಲ್ಲಿ 10 ಲಕ್ಷ ಉಯಿಘರ್ ಹಾಗೂ ತುರ್ಕಿಕ್ ಮುಸ್ಲಿಮರನ್ನು ಚೀನಾವು ಬಂಧನ ಕೇಂದ್ರಗಳಲ್ಲಿರಿಸಿದ್ದು, ಅವರನ್ನು ಚೀನಾದ ಬಹುಸಂಖ್ಯಾತ ಹಾನ್ ಸಮುದಾಯದ ಜೀವನಶೈಲಿಯನ್ನು ಬಲವಂತವಾಗಿ ಅಳವಡಿಸಿಕೊಳ್ಳುವಂತೆ ಮಾಡಲಾಗುತ್ತಿದೆ ಎಂದು ಮಾನವಹಕ್ಕು ಸಂಘಟನೆಗಳು ಹಾಗೂ ಪ್ರತ್ಯಕ್ಷದರ್ಶಿಗಳು ಆಪಾದಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News