ಮಾನವನ ಜೀವಿತಾವಧಿ ವಿಸ್ತರಿಸುವ ಔಷಧ ಪತ್ತೆ?

Update: 2020-07-12 17:22 GMT

ಲಾಸ್ ಏಂಜಲಿಸ್ (ಕ್ಯಾಲಿಫೋರ್ನಿಯ), ಜು. 12: ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯದ ವಿಶ್ವವಿದ್ಯಾನಿಲಯವೊಂದರ ವಿಜ್ಞಾನಿಗಳು, ಮಾನವರ ಜೀವಿತಾವಧಿಯನ್ನು ವಿಸ್ತರಿಸುವುದಕ್ಕೆ ಅಗತ್ಯವಾದ ದಾರಿಯ ಆರಂಭವನ್ನು ಪತ್ತೆಹಚ್ಚಿದ್ದಾರೆ ಎಂಬುದಾಗಿ ಭಾವಿಸಲಾಗಿದೆ.

‘ಮೈಫ್ಪ್ರಿಸ್ಟೋನ್’ ಎಂಬ ಔಷಧಿಯು ಪ್ರಯೋಗಾಲಯದಲ್ಲಿ ಎರಡು ಬೇರೆ ಬೇರೆ ಜೀವಿಗಳ ಜೀವಿತಾವಧಿಯನ್ನು ವಿಸ್ತರಿಸಬಲ್ಲದು ಎನ್ನುವುದನ್ನು ‘ಜರ್ನಲ್ ಆಫ್ ಜೆರಂಟಾಲಜಿ: ಬಯಲಾಜಿಕಲ್ ಸಯನ್ಸಸ್’ ಎಂಬ ಪತ್ರಿಕೆಯಲ್ಲಿ ಜುಲೈ 10ರಂದು ಪ್ರಕಟಗೊಂಡ ಸಂಶೋಧನೆಯೊಂದು ತೋರಿಸಿದೆ. ದಕ್ಷಿಣ ಕ್ಯಾಲಿಫೋರ್ನಿಯದ ಯುಎಸ್ಸಿ ಡಾರ್ನ್ಸೈಫ್ ಕಾಲೇಜ್ ಆಫ್ ಲೆಟರ್ಸ್, ಆರ್ಟ್ಸ್ ಏಂಡ್ ಸಯನ್ಸಸ್ನ ವಿಜ್ಞಾನಿಗಳ ತಂಡವು ಈ ಸಂಶೋಧನೆಯನ್ನು ನಡೆಸಿದೆ.

ಮೈಫ್ಪ್ರಿಸ್ಟೋನ್ ಅಥವಾ ಆರ್ಯು-486 ಎಂಬ ಔಷಧವನ್ನು ವೈದ್ಯರು ಆರಂಭಿಕ ಗರ್ಭಪಾತಗಳನ್ನು ನಡೆಸಲು ಹಾಗೂ ಕ್ಯಾನ್ಸರ್ ಮತ್ತು ಕಶಿಂಗ್ ಕಾಯಿಲೆಗೆ ಚಿಕಿತ್ಸೆ ನೀಡಲು ಬಳಸುತ್ತಾರೆ.

ಈ ಪ್ರಯೋಗದ ಫಲಿತಾಂಶವು ಮಾನವರು ಸೇರಿದಂತೆ ಇತರ ಜೀವಿಗಳಿಗೂ ಅನ್ವಯಿಸಬಹುದು ಎಂದು ಸಂಶೋಧನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News