ಒಲಿಂಪಿಕ್ಸ್ ಗೆ ಅರ್ಹತೆ ಪಡೆಯದೇ ಇರುವುದಕ್ಕೆ ಚಿಂತಿಸಲಾರೆ: ಹಿಮಾ ದಾಸ್

Update: 2020-07-13 09:45 GMT

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿ ಕೊಳ್ಳದೆ ಇರುವುದಕ್ಕೆ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಚಿಂತಿತರಾಗಿಲ್ಲ. ಕೋವಿಡ್-19ನಿಂದಾಗಿ ಸ್ಥಗಿತಗೊಂಡಿರುವ ಅಂತರ್‌ರಾಷ್ಟ್ರೀಯ ಕ್ರೀಡಾ ಋತು ಮತ್ತೆ ಪುನಾರಂಭವಾದ ಬಳಿಕ ಮೊದಲ ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸುವೆ ಎಂದಿದ್ದಾರೆ.

400 ಮೀ. ಓಟದಲ್ಲಿ ಹಾಲಿ ಜೂನಿಯರ್ ವಿಶ್ವ ಚಾಂಪಿಯನ್ ಆಗಿರುವ ಹಿಮಾ ದಾಸ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಇನ್ನಷ್ಟೇ ಅರ್ಹತೆ ಪಡೆಯಬೇಕಾಗಿದೆ. ಜಾಗತಿಕ ಆರೋಗ್ಯ ಬಿಕ್ಕಟ್ಟಿನಿಂದಾಗಿ ನವೆಂಬರ್ 30ರ ತನಕವೂ ಅಂತರ್‌ರಾಷ್ಟ್ರೀಯ ಕ್ರೀಡಾ ಋತು ರದ್ದುಗೊಂಡಿದೆ.

  ‘‘ಒಲಿಂಪಿಕ್ಸ್ ಅರ್ಹತೆಯ ಕುರಿತು ನಾನು ಚಿಂತಿತಳಾಗಿಲ್ಲ. ಇದು ಕೇವಲ ತಲೆನೋವು ಸೃಷ್ಟಿಸುತ್ತದೆ. ಒಲಿಂಪಿಕ್ಸ್‌ಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಜಗತ್ತನ್ನೇ ಕಾಡುತ್ತಿರುವ ಸಾಂಕ್ರಾಮಿಕ ಕಾಯಿಲೆ ಮೊದಲಿಗೆ ಶೀಘ್ರವೇ ಅಂತ್ಯವಾಗಲಿ ಎಂದು ಪ್ರಾರ್ಥಿಸುವೆ. ಅಥ್ಲೆಟಿಕ್ಸ್ ಋತು ಡಿಸೆಂಬರ್ 1ರಿಂದ ಆರಂಭವಾದರೆ, ಮುಂದಿನ ವರ್ಷದ ಒಲಿಂಪಿಕ್ಸ್‌ಗೆ ಸಾಕಷ್ಟು ಸಮಯ ಸಿಗಲಿದೆ’’ ಎಂದು ಸರಿಯಾಗಿ ಎರಡು ವರ್ಷಗಳ ಹಿಂದೆ ಫಿನ್‌ಲ್ಯಾಂಡ್‌ನಲ್ಲಿ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಹಿಮಾ ದಾಸ್ ಹೇಳಿದ್ದಾರೆ.

‘‘ಧಿಂಗ್ ಎಕ್ಸ್‌ಪ್ರೆಸ್’’ಎಂದೇ ಖ್ಯಾತಿ ಪಡೆದಿರುವ 20ರ ಹರೆಯದ ಹಿಮಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬಂಗಾರದ ಪದಕ ಜಯಿಸಿರುವ ಭಾರತದ ಮೊದಲ ಮಹಿಳಾ ಅಥ್ಲೀಟ್ ಆಗಿದ್ದಾರೆ. 400 ಮೀ. ಓಟದಲ್ಲಿ ಹಿಮಾ ರಾಷ್ಟ್ರೀಯ ದಾಖಲೆ(50.79 ಸೆಕೆಂಡ್)ನಿರ್ಮಿಸಿದ್ದಾರೆ.

ಹಿಮಾಗೆ ಕಳೆದ ಕೆಲವು ಸಮಯದಿಂದ ಬೆನ್ನುನೋವಿನ ಸಮಸ್ಯೆ ಕಾಡುತ್ತಿದೆ. ಭವಿಷ್ಯದಲ್ಲಿ ಹಿಮಾ 400 ಮೀ. ಓಟದಲ್ಲಿ ಸ್ಪರ್ಧಿಸದೆ 200 ಮೀ. ಓಟದಲ್ಲಿ ಮಾತ್ರ ಗಮನ ನೀಡಲಿದ್ದಾರೆ ಎಂಬ ಊಹಾಪೋಹವೂ ಕೇಳಿಬಂದಿದೆ.

ಈ ಕುರಿತು ಹಿಮಾರಲ್ಲಿ ಕೇಳಿದಾಗ,‘‘ನಾನು ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದೇನೆ. ನನ್ನ ಕೋಚ್ ಹಾಗೂ ಎಎಫ್‌ಐ ಏನೇ ನಿರ್ಧರಿಸಿದರೂ ಅದನ್ನು ನಾನು ಮಾಡುತ್ತೇನೆ. ನಾನು 400 ಮೀ., 200 ಮೀ. ಓಟದಲ್ಲಿ ಸ್ಪರ್ಧಿಸುವ ಕುರಿತು ಅವರೇ ನಿರ್ಧರಿಸುತ್ತಾರೆ’’ ಎಂದರು.

ನೀವು ಬೆನ್ನುನೋವಿನಿಂದ ಸಂಪೂರ್ಣ ಚೇತರಿಸಿಕೊಂಡಿದ್ದೀರಾ? ಎಂದು ಕೇಳಿದಾಗ, ‘‘ಈ ಪ್ರಕ್ರಿಯೆ ನಡೆಯುತ್ತಿದೆ. ಹೊರಾಂಗಣ ತರಬೇತಿಗೆ ಒಳಗಾಗಲು ನಾನು ಫಿಟ್ ಇದ್ದೇನೆ ಹಾಗೂ ಕಳೆದ 30ರಿಂದ 40 ದಿನಗಳಿಂದ ಹೊರಾಂಗಣ ತರಬೇತಿಯಲ್ಲಿ ನಿರತನಾಗಿದ್ದೇನೆ’’ ಎಂದರು.

ಹಿಮಾ 2018ರ ಏಶ್ಯನ್ ಗೇಮ್ಸ್‌ನಲ್ಲಿ 400 ಮೀ. ಓಟದ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಹಾಗೂ ಮಹಿಳೆಯರ 4-400 ಮೀ. ರಿಲೇ ಹಾಗೂ 4-400 ಮೀ. ಮಿಕ್ಸೆಡ್ ರಿಲೇ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಜಯಿಸಿದ್ದರು.

ಏಶ್ಯನ್ ಗೇಮ್ಸ್‌ನಲ್ಲಿ ಓಟದ ಸ್ಪರ್ಧೆಯಲ್ಲಿರುವಾಗಲೇ ಹಿಮಾಗೆ ಬೆನ್ನುನೋವು ಕಾಣಿಸಿಕೊಂಡಿತ್ತು. ಕಳೆದ ವರ್ಷದ ಎಪ್ರಿಲ್‌ನಲ್ಲಿ ದೋಹಾದಲ್ಲಿ ನಡೆದಿದ್ದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕ 400 ಮೀ. ರೇಸ್‌ನ ಮಧ್ಯದಲ್ಲೇ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಆ ನಂತರ ವಿಶ್ವ ಚಾಂಪಿಯನ್‌ಶಿಪ್ ತಂಡದಿಂದ ಕೈಬಿಡಲ್ಪಟ್ಟಿದ್ದರು. ಬೆನ್ನುನೋವಿಗೆ ಚಿಕಿತ್ಸೆ ಪಡೆದ ಬಳಿಕ ಕಳೆದ ವರ್ಷದ ಜುಲೈ ಹಾಗೂ ಆಗಸ್ಟ್‌ನಲ್ಲಿ ಪೊಲ್ಯಾಂಡ್ ಹಾಗೂ ಝೆಕ್ ರಿಪಬ್ಲಿಕ್‌ನಲ್ಲಿ ನಡೆದ ಆರು ಕೆಳ ದರ್ಜೆಯ ರೇಸ್‌ಗಳಲ್ಲಿ ಜಯಶಾಲಿಯಾಗಿದ್ದರು. ಕಳೆದ ವರ್ಷವಿಡೀ ಕೇವಲ ಒಂದು ಬಾರಿ ಮಾತ್ರ 400 ಮೀ. ಓಟದಲ್ಲಿ ಭಾಗವಹಿಸಿದ್ದರು. ಐದರಲ್ಲಿ ನಾಲ್ಕು ಬಾರಿ 200 ಮೀ. ರೇಸ್‌ನಲ್ಲಿ ಜಯ ಸಾಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News