ಅಂಗನವಾಡಿ ನೌಕರರಿಗೆ ಕೊರೋನ ಸುರಕ್ಷತಾ ಕಿಟ್‌ಗಳನ್ನು ನೀಡಿ: ಸುಶೀಲ ನಾಡ ಆಗ್ರಹ

Update: 2020-07-13 10:25 GMT

ಉಡುಪಿ, ಜು.13: ಲಾಕ್‌ಡೌನ್ ಸಂದರ್ಭದಲ್ಲಿ ಆಹಾರ ಸಾಮಾಗ್ರಿಗಳನ್ನು ಹಂಚುವ ವಿಚಾರವಾಗಿ ಸರ್ವೆ ಮತ್ತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡುವ ಅಂಗನವಾಡಿ ನೌಕರರಿಗೆ ಗುಣಮಟ್ಟದ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್, ಪಿಪಿಇ ಕಿಟ್‌ಗಳನ್ನು ನೀಡದ ಪರಿಣಾಮ ರಾಜ್ಯದಲ್ಲಿ ಹಲವು ಮಂದಿಗೆ ಸೋಂಕು ತಗಲಿದೆ. ಆದುದರಿಂದ ಅಂಗನವಾಡಿಗಳಿಗೆ ಕೋವಿಡ್ ಸುರಕ್ಷತಾ ಪರಿಕರಗಳನ್ನು ಕೂಡಲೇ ನೀಡಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಉಡುಪಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಶೀಲ ನಾಡ ಆರೋಪಿಸಿದ್ದಾರೆ.

ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಐಸಿಡಿಎಸ್ ಯೋಜನೆಗೆ ಅನುದಾನವನ್ನು ಹೆಚ್ಚಳ ಮಾಡಬೇಕು. ಕೊರೋನ ಸಂದರ್ಭದಲ್ಲಿ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ 25 ಸಾವಿರ ಪ್ರೋತ್ಸಾಹಧನ, ಸ್ಥಳೀಯ ಸಾರಿಗೆ ಬಸ್‌ ಪಾಸ್ ಮತ್ತು ಊಟದ ವೆಚ್ಚವನ್ನು ನೀಡಬೇಕು. ಕೊರೋನ ವಾರಿಯರ್ಸ್‌ ಆಗಿರುವ ಅಂಗನವಾಡಿ ನೌಕರರಿಗೆ 50 ಲಕ್ಷ ವಿಮೆ ನೀಡಬೇಕು. ಈಗಿರುವ ಎನ್‌ಪಿಎಸ್ ಲೈಟ್‌ನ್ನು ಬದಲಾಯಿಸಿ ಎಲ್‌ಐಸಿ ಆಧಾರಿತ ನಿವೃತ್ತಿ ವೇತನವನ್ನು ನೀಡಬೇಕು. ಮೇಲ್ವಿಚಾರಕಿ ಹುದ್ದೆಗೆ ಶೇ.100 ಮೀಸಲಾತಿ ಮತ್ತು ಸೇವಾ ಹಿರಿತನ ಆಧಾರದಲ್ಲಿ ಅಂಗನವಾಡಿ ನೌಕರರಿಗೆ ಮುಂಬಡ್ತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಗೆ ಸಲ್ಲಿಸಲಾಯಿತು. ಸಂಘದ ಉಡುಪಿ ಜಿಲ್ಲಾಧ್ಯಕ್ಷೆ ಭಾರತಿ, ಕೋಶಾಧಿಕಾರಿ ಯಶೋಧ ಕೆ., ವಲಯ ಮುಖಂಡರಾದ ಲಲಿತಾ, ಡೆಲ್ಫಿನ್, ಶಾಂತಾ, ಅಶ್ವಿನಿ, ಸಿಐಟಿಯು ಉಡುಪಿ ತಾಲೂಕು ಕಾರ್ಯದರ್ಶಿ ಕವಿರಾಜ್ ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪುರದಲ್ಲಿ ಧರಣಿ: ಕರ್ನಾಟಕ ರಾಜ್ಯ ಅಂನವಾಡಿ ನೌಕರರ ಸಂಘ (ಸಿಐಟಿಯು) ಕುಂದಾಪುರ ತಾಲೂಕು ಸಮಿತಿಯ ನೇತೃತ್ವದಲ್ಲಿ ಅಂಗನವಾಡಿ ನೌಕರರು ಇಂದು ಕುಂದಾಪುರದ ಸಿಡಿಪಿಓ ಕಛೇರಿ ಮುಂಭಾಗ ಧರಣಿ ನಡೆಸಿ ಸಿಡಿಪಿಓ ಅಧಿಕಾರಿ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.

ಸಂಘದ ತಾಲೂಕು ಅಧ್ಯಕ್ಷೆ ಬಿ.ಆಶಾಲತಾ ಶೆಟ್ಟಿ, ಕಾರ್ಯದರ್ಶಿ ಭಾಗ್ಯವತಿ, ಮುಖಂಡರಾದ ಅಶ್ವಿನಿ, ಸರಸ್ವತಿ, ಜಯಲಕ್ಷ್ಮೀ, ಸಿಐಟಿಯು ತಾಲೂಕು ಸಂಚಾಲಕ ಎಚ್.ನರಸಿಂಹ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News