ಲಾಕ್‌ಡೌನ್ ಸಂದರ್ಭ ಜನಸಾಮಾನ್ಯರ ಸಂಕಷ್ಟಗಳನ್ನು ಪರಿಹರಿಸಬೇಕಿದೆ: ಮಾಜಿ ಮೇಯರ್ ಕವಿತಾ ಸನಿಲ್

Update: 2020-07-13 11:38 GMT

ಮಂಗಳೂರು, ಜು.13: ದ.ಕ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಗುರುವಾರದಿಂದ ಲಾಕ್‌ಡೌನ್ ಪ್ರಕಟಿಸಿದ್ದಾರೆ. ಆದರೆ ಈ ಸಂದರ್ಭ ಜನಸಾಮಾನ್ಯರ ಸಂಕಷ್ಟಗಳ ಕುರಿತಂತೆ ಜಿಲ್ಲಾಡಳಿತ ಸೂಕ್ತ ಕ್ರಮ ವಹಿಸಬೇಕು ಎಂದು ಕವಿತಾ ಸನಿಲ್ ಅಭಿಪ್ರಾಯಿಸಿದ್ದಾರೆ.

ಕೊರೋನ ಸೋಂಕು ತೀವ್ರಗೊಳ್ಳುತ್ತಿದ್ದು, ಲಾಕ್‌ಡೌನ್ ಬೇಕು. ಆದರೆ ದಿನಕೂಲಿ ಸೇರಿದಂತೆ ಮಧ್ಯಮ ವರ್ಗದ ಬಗ್ಗೆ ಆಲೋಚನೆ ಮಾಡಬೇಕಾಗಿದೆ. ನಿನ್ನೆ ಸುಮಾರು ಅರ್ಧ ತಾಸು ಉಸ್ತುವಾರಿ ಸಚಿವರ ಬಳಿ ಮಾತನಾಡಿದ್ದೇನೆ. ನಾವು ಏನು ತಪ್ಪು ಮಾಡುತ್ತಿದ್ದೇವೆಯೋ ಅದನ್ನು ಮೊದಲು ಸರಿಪಡಿಸಿಕೊಳ್ಳಬೇಕಾಗಿದೆ. ಲಾಕ್‌ಡೌನ್ ಮಾಡುವ ಪರಿಸ್ಥಿತಿ ಇಲ್ಲಿಯಾಕೆ ಬಂತು ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಮೊದಲು ಇಲ್ಲಿ ಹೆಚ್ಚಿನ ಪ್ರಕರಣಗಳಿರಲಿಲ್ಲ. ಈ ಬಗ್ಗೆ ನಾನು ಉಸ್ತುವಾರಿ ಸಚಿವರ ಗಮನ ಸೆಳೆದಿದ್ದೇನೆ. ಹೊರದೇಶಗಳಿಂದ ಬಂದವರನ್ನು ಹಿಂದೆ ಸರಕಾರಿ ಸೂಚಿತ ಅಥವಾ ಜಿಲ್ಲಾಡಳಿತದ ಸಲಹೆಯ ಮೇರೆಗೆ ಅವರ ಆಯ್ಕೆಯ ಲಾಡ್ಜ್ಗಳಿಗೆ ಕಳುಹಿಸಲಾಗುತ್ತಿತ್ತು.

ಇದೀಗ ಹೊರ ದೇಶದಿಂದ ಬಂದವರನ್ನು ವಾಹನಗಳ ಮೂಲಕ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ. ಅವರ ಗಂಟಲ ದ್ರವದ ಮಾದರಿ ಬಳಿಕ ಸಂಗ್ರಹಿಸಿ ಕೊರೋನ ತಪಾಸಣೆಗೊಳಪಡಿಸಲಾಗುತ್ತಿದೆ. ಇದು ದೊಡ್ಡ ತಪ್ಪು. ಆ ಆಸ್ಪತ್ರೆಗೆ ಇತರ ಚಿಕಿತ್ಸೆಗಾಗಿಯೂ ಅನೇಕರು ಭೇಟಿ ನೀಡುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಹೊರ ದೇಶಗಳಿಂದ ಬಂದವರನ್ನು ನೇರವಾಗಿ ಆಸ್ಪತ್ರೆಗೆ ತರಲಾಗುತ್ತದೆ ಎಂದು ಆರೋಪಿಸಿರುವ ಕವಿತಾ ಸನಿಲ್, ಹೊಟೇಲ್‌ಗಳಲ್ಲಿ ಉಳಿದುಕೊಂಡವರನ್ನು ಏಳು ದಿನಗಳಲ್ಲಿ ವರದಿ ಬರುವ ಮೊದಲೇ ಸೀಲ್ ಹಾಕಿ ಕಳುಹಿಸಲಾಗುತ್ತಿದೆ. ವರದಿ ಬಾರದೆ ಮನೆಗೆ ಕಳುಹಿಸಿ ಹೋಂ ಕ್ವಾರಂಟೈನ್‌ಗೆ ಕಳುಹಿಸಿದ ಬಳಿಕ ಅವರ ಮೇಲೆ ನಿಗಾ ಇರಿಸುವವರು ಯಾರು ಎಂದು ಪ್ರಶ್ನಿಸಿದ್ದಾರೆ.

ಕೊರೋನ ಸೋಂಕಿತನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಕನಿಷ್ಠವೆಂದರೂ ಒಂದು ಲಕ್ಷ ವೆಚ್ಚವಾಗುತ್ತಿದೆ. ಈ ಬಗ್ಗೆ ಸರಕಾರ ಖಾಸಗಿ ಆಸ್ಪತ್ರೆಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಬೇಕಾಗಿದೆ. ಸಾಮಾನ್ಯ ಜನರು ಚಿಕಿತ್ಸೆಗೆ ಇಷ್ಟೊಂದು ವೆಚ್ಚ ಮಾಡಲು ಸಾಧ್ಯವಿಲ್ಲ. ಮೂರು ತಿಂಗಳ ಲಾಕ್‌ಡೌನ್‌ನಿಂದಾಗಿ ಜನರು ಆರ್ಥಿಕವಾಗಿ ಕಂಗಾಲಾಗಿದ್ದಾರೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News