ಉಡುಪಿಯಲ್ಲಿ ನೂತನ ಬಡಾವಣೆಗಳ ನಿರ್ಮಾಣ: ಸಚಿವ ಬಸವರಾಜ

Update: 2020-07-13 17:11 GMT

ಉಡುಪಿ, ಜು.13: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ನಗರಸಭಾ ವ್ಯಾಪ್ತಿಯಲ್ಲಿ ನೂತನ ಬಡಾವಣೆಗಳ ನಿರ್ಮಾಣಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಭರವಸೆ ನೀಡಿದ್ದಾರೆ.

ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಉಡುಪಿ ಜಿಲ್ಲೆಗೆ ಆಗಮಿಸಿದ ಸಚಿವರು, ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದರು.

ಉಡುಪಿಯಂಥ ನಗರದಲ್ಲಿ ಪ್ರಾಧಿಕಾರದಿಂದ ಬಡಾವಣೆ ನಿರ್ಮಾಣ ಕಾರ್ಯ ನಡೆದಿಲ್ಲ ಎಂದು ತಿಳಿದು ಅಚ್ಚರಿಯಾಗಿದೆ. ಯಡಿಯೂರಪ್ಪ ನೇತೃತ್ವದ ಸರಕಾರ ಇದೀಗ ಇಂಥಾ ಬಡವಾಣೆ ನಿರ್ಮಾಣಕ್ಕೆ ಹೊಸ ಯೋಜನೆಯನ್ನು ರೂಪಿಸಿದ್ದು, ಅದರಂತೆ ಭೂಮಾಲಕರಿಂದ ಜಮೀನು ಪಡೆದು ಅದನ್ನು 50:50ರ ಪ್ರಮಾಣದಲ್ಲಿ ಸೈಟ್ ಮಾಡಿ ಹಂಚುವ ಪ್ರಸ್ತಾಪ ಇಡಲಾಗುವುದು ಎಂದರು.

ಅಲ್ಲದೇ ರಾಜ್ಯದಲ್ಲಿ ನಿರ್ಮಾಣಗೊಳ್ಳುವ ಬಡಾವಣೆಗಳಲ್ಲಿ ಶೇ.5ರಷ್ಟನ್ನು ಪತ್ರಕರ್ತರಿಗೆ ಮೀಸಲಿರಿಸುವ ಬಗ್ಗೆಯೂ ಶೀಘ್ರವೇ ಆದೇಶ ಹೊರಡಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವರು ತಿಳಿಸಿದರು.

ತಮ್ಮ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಕುಂದಾಪುರ ನಗರ ನೀರು ಸರಬರಾಜು ಯೋಜನೆಯಲ್ಲಿ ಶೇ.60ರಿಂದ 70ರಷ್ಟು ಕಾಮಗಾರಿ ಮುಗಿದಿರು ವುದಾಗಿ ಅಧಿಕಾರಿಗಳು ತಿಳಿಸಿದ್ದು, ಉಳಿದ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಅದನ್ನು ಬಿಡುವಂತೆ ಸೂಚಿಸಿದ್ದಾಗಿ ತಿಳಿಸಿದರು.

ಕಾಪುವಿನಲ್ಲಿ 46 ಕೋಟಿ ರೂ.ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ದೊರಕಿದ್ದು, ಭೂಸ್ವಾಧೀನದ ಸಮಸ್ಯೆಯನ್ನು ಬಗೆ ಹರಿಸಿಕೊಂಡು ಕಾಮಗಾರಿ ಪ್ರಾರಂಭಿಸುವಂತೆ ತಿಳಿಸಿದ್ದೇನೆ ಎಂದರು.

ಉಡುಪಿ ನಗರಸಭಾ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆ 10ವರ್ಷಗಳಷ್ಟು ಹಳೆಯದಾಗಿದ್ದು, ಹೊಸ ವಿನ್ಯಾಸದ ಪ್ರಸ್ತಾಪವನ್ನು ಶಾಸಕ ಕೆ.ರಘುಪತಿ ಭಟ್ ಸಭೆಯ ಮುಂದಿಟ್ಟರು. ಕೂಡಲೇ ಈ ಬಗ್ಗೆ ಡಿಪಿಆರ್ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದೇ ರೀತಿ ಕುಡಿಯುವ ನೀರಿನ ಯೋಜನೆಗೂ ಡಿಪಿಆರ್ ತಯಾರಿಸುವಂತೆ ತಿಳಿಸಿದ್ದೇನೆ ಎಂದು ಬಸವರಾಜ ತಿಳಿಸಿದರು.

 ಕಾರ್ಕಳದಲ್ಲೂ 16-18 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯುತ್ತಿದೆ. ಮುಂದಿನ ಬಾರಿ ಬಂದಾಗ ಅದರ ಪರಿಶೀಲನೆಗೆ ಬರುವುದಾಗಿ ತಿಳಿಸಿದ್ದೇನೆ. ಕೊಲ್ಲೂರು ದೇವಸ್ಥಾನ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆ ಕಾಮಗಾರಿ ಮುಕ್ತಾಯ ಗೊಂಡಿದ್ದು, ಮುಖ್ಯಮಂತ್ರಿಗಳು ಭಾಗವಹಿಸುವಂತೆ ಅದರ ಉದ್ಘಾಟನೆಗೆ ಸಿದ್ಧತೆಗಳನ್ನು ನಡೆಸುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿರುವುದಾಗಿ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.

ಮೀಸಲಾತಿ ಪಟ್ಟಿ ಸಿದ್ಧ

ವರ್ಷದಿಂದ ನೆನೆಗುದಿಗೆ ಬಿದ್ದಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಮೀಸಲಾತಿಯ ಕುರಿತಂತೆ 3-4 ಸಚಿವ ಸಂಪುಟದ ಸಭೆ ಗಳಲ್ಲಿ ಚರ್ಚಿಸಿ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಅದನ್ನು ಇನ್ನು ಅನುಮೋದನೆಗಾಗಿ ರಾಜ್ಯ ಉಚ್ಛ ನ್ಯಾಯಾಲಯದ ಮುಂದೆ ಇರಿಸಿ ಅದಕ್ಕೆ ಅನುಮತಿಯನ್ನು ಪಡೆಯಲಾಗುವುದು ಎಂದು ಸಚಿವ ಬಸವರಾಜ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News