ಉಡುಪಿ: ಲಾಕ್‌ಡೌನ್ ಬಗ್ಗೆ ಮಂಗಳವಾರ ಅಂತಿಮ ನಿರ್ಧಾರ

Update: 2020-07-13 12:01 GMT

ಉಡುಪಿ, ಜು.13: ರಾಜ್ಯದಲ್ಲಿ ಕೊರೋನ ಪಿಡುಗು ಮಿತಿಮೀರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಗಳಲ್ಲಿ ಮತ್ತೆ ಲಾಕ್‌ಡೌನ್ ವಿಧಿಸುವ ಸಂಬಂಧ ಜಿಲ್ಲಾಡಳಿತಗಳು ಆಯಾ ಜಿಲ್ಲೆಗಳಲ್ಲಿ ಅಲ್ಲಿನ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಇಂದು ನಡೆಸಿದ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಸೂಚಿಸಿದ್ದು, ಅದರಂತೆ ಉಡುಪಿ ಜಿಲ್ಲೆಯಲ್ಲಿ ನಾಳೆ ಬೆಳಗ್ಗೆ 10 ಗಂಟೆಗೆ ಸಭೆ ಕರೆದು ಎಲ್ಲಾ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ಇಂದು ಬೆಳಗ್ಗೆ ರಾಜ್ಯದಲ್ಲಿ ಅತಿಹೆಚ್ಚು ಕೇಸುಗಳಿರುವ 11 ಜಿಲ್ಲೆಗಳ ಜಿಲ್ಲಾಧಿಕಾರಿ, ಎಸ್ಪಿ ಮತ್ತು ಸಿಇಓಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದು, ಅದರಲ್ಲಿ ತಮ್ಮ ತಮ್ಮ ಜಿಲ್ಲೆಗಳ ಸ್ಥಿತಿಗತಿಯ ಕುರಿತು ಸಮಗ್ರ ಮಾಹಿತಿಗಳನ್ನು ಪಡೆದುಕೊಂಡಿದ್ದು, ಕೊನೆಯಲ್ಲಿ ಆಯಾ ಜಿಲ್ಲೆಗಳ ಲಾಕ್‌ಡೌನ್ ಸಂಬಂಧ ಜಿಲ್ಲಾಡಳಿತ ನಿರ್ಧಾರ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ನಮ್ಮ ಜಿಲ್ಲೆಯ ಮಟ್ಟಿಗೆ ಜಿಲ್ಲೆಯ ಗಡಿಗಳನ್ನು ಬಂದ್ ಮಾಡಿ ಹೊರಜಿಲ್ಲೆಯವರು ಇಲ್ಲಿಗೆ ಬಾರದಂತೆ ತಡೆದರೆ, ನಮ್ಮ ಜಿಲ್ಲೆಯಲ್ಲಿ ಕೇಸನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇವೆ. ಆದರೂ ಸ್ಥಳೀಯವಾಗಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವಂತೆ ತಮಗೆ ಸೂಚಿಸಿದರು ಎಂದವರು ವಿವರಿಸಿದರು.

ಕೇವಲ ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಮಾತ್ರ ಸರಕಾರದ ವತಿಯಿಂದ ಲಾಕ್‌ಡೌನ್ ಮಾಡಲು ನಿರ್ಧರಿಸಿದ್ದು, ಉಳಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಚರ್ಚಿಸಿ ನಿರ್ಧರಿಸುವಂತೆ ತಿಳಿಸಿದ್ದು, ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್ ಮಾಡಬೇಕೊ, ಬೇಡವೊ ಎಂಬ ಬಗ್ಗೆ, ಅವುಗಳ ಸಾಧಕ-ಬಾದಕಗಳ ಬಗ್ಗೆ ನಾಳಿನ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಗುವುದು ಎಂದರು.

ಜಿಲ್ಲೆಯ ಎಲ್ಲಾ ಶಾಸಕರು, ಸಂಸದ್ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ, ಲಾಕ್‌ಡೌನ್ ಬೇಕೊ, ಬೇಡವೊ ಎಂಬ ಬಗ್ಗೆ ನಿರ್ಧರಿಸಲಾಗುವುದು. ಅನಂತರ ಈ ಬಗ್ಗೆ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಲಾಕ್‌ಡೌನ್ ಮಾಡುವುದಿದ್ದರೂ ಜಿಲ್ಲೆಯ ಸಾರ್ವಜನಿಕರಿಗೆ ಸಾಕಷ್ಟು ಅವಕಾಶ ನೀಡುತ್ತೇವೆ ಎಂದೂ ಜಗದೀಶ್ ತಿಳಿಸಿದರು.

ಗಡಿ ಸೀಲ್‌ಡೌನ್?: ಉಡುಪಿ ಜಿಲ್ಲೆಯಲ್ಲಿ ಲಾಕ್‌ಡೌನ್‌ಗೆ ಬದಲು ಗಡಿಗಳ ಸೀಲ್‌ಡೌನ್‌ಗೆ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಜಿಲ್ಲೆಯ ಗಡಿಗಳನ್ನು ಬಂದ್ ಮಾಡಿ, ಜಿಲ್ಲೆಯೊಳಗಿನ ಎಲ್ಲಾ ಕಾರ್ಯಚಟುವಟಿಕೆಗಳನ್ನು ಎಂದಿನಂತೆ ಮುಂದುವರಿಸಲು ಅವಕಾಶ ನೀಡಬೇಕೆಂಬ ಅಭಿಪ್ರಾಯವಿದೆ. ಜಿಲ್ಲೆಯಲ್ಲಿ ಯಾರಿಗಾದರೂ ಹೊರಗೆ ಹೋಗಲು ಹಾಗೂ ಜಿಲ್ಲೆಗೆ ಬರುವವರಿಗೆ ಜಿಲ್ಲೆಯೊಳಗೆ ಬರಲು ಸಮಯಾವಕಾಶ ನೀಡಿ ಅನಂತರ ಗಡಿಯನ್ನು ಸೀಲ್ ಮಾಡಬೇಕು ಎಂಬ ಸಲಹೆ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ವಿಷಯವನ್ನೂ ನಾಳೆ ಬೆಳಗ್ಗೆ ನಡೆಯುವ ಸಭೆಯಲ್ಲಿ ಇಟ್ಟು, ಜನಪ್ರತಿನಿಧಿಗಳೊಂದಿಗೆ ಕೂಲಂಕಷವಾಗಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಹಾಗೂ ಅದರ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News