ಜಿಲ್ಲೆಯಲ್ಲಿ ಎಸೆಸೆಲ್ಸಿ ಮೌಲ್ಯಮಾಪನ ನಿರಾತಂಕ: ಉಡುಪಿ ಡಿಸಿ

Update: 2020-07-13 12:04 GMT

ಉಡುಪಿ, ಜು.13: ಜಿಲ್ಲೆಯಲ್ಲಿ ಲಾಕ್‌ಡೌನ್ ಕುರಿತಂತೆ ನಾಳೆ ಯಾವ ನಿರ್ಧಾರ ಕೈಗೊಂಡರೂ ಈಗ ನಡೆದಿರುವ ಎಸೆಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಿರಾತಂಕವಾಗಿ ಮುಂದುವರಿಯಲಿದೆ. ಬಸ್ಸು ಸೇರಿದಂತೆ ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ನಾವು ಮಾಡಿಕೊಡುತ್ತೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

 ಜಿಲ್ಲೆಯಲ್ಲಿ ಇನ್ನೊಂದು ವಾರ ಕಾಲ ಮೌಲ್ಯಮಾಪನ ಮುಂದುವರಿಯುತ್ತದೆ ಎಂದರು. ಜಿಲ್ಲೆಯಲ್ಲಿ ಓಡಾಡುವ ಖಾಸಗಿ ಬಸ್‌ಗಳಲ್ಲಿ ಸುರಕ್ಷತಾ ಅಂತರ ಸೇರಿದಂತೆ ಕೋವಿಡ್ ಮುಂಜಾಗ್ರತೆ ಕೈಗೊಳ್ಳದ ಕುರಿತು ಪ್ರಶ್ನಿಸಿದಾಗ, ಇಂಥ ಬಸ್‌ಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಆರ್‌ಟಿಓಗೆ ಸೂಚಿಸಿದ್ದು, ಈಗಾಗಲೇ 18-20 ಬಸ್‌ಗಳ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ ಎಂದರು.

ಇನ್ನು ಮುಂದೆ ಸಹ ಸಾರ್ವಜನಿಕ ಸಾರಿಗೆಯಲ್ಲಿ ತುಂಬಾ ಎಚ್ಚರಿಕೆ ಇರಬೇಕಾಗುತ್ತದೆ. ಇದರ ಮೂಲಕ ಕಾಯಿಲೆಯನ್ನು ಆಹ್ವಾನಿಸಿಕೊಂ ಡಂತಾಗುತ್ತದೆ.ನಾಳಿನ ಸಭೆಯಲ್ಲೂ ಸಾರ್ವಜನಿಕ ಸಾರಿಗೆ ಇರಬೇಕೊ, ಬೇಡವೊ ಎಂಬ ಬಗ್ಗೆಯೇ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಸರಕಾರದ ನಿಯಮಗಳ ಪಾಲನೆ ಕಡ್ಡಾಯ. ಈ ಬಗ್ಗೆ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘನೆ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವಂತೆ ತಿಳಿಸಿದ್ದೇನೆ ಎಂದರು.

ಸಭೆ, ಸಮಾರಂಭಗಳಿಗೆ ಅವಕಾಶವಿಲ್ಲ

 ಜಿಲ್ಲೆಗಳಲ್ಲಿ ನಡೆಯುವ ಮದುವೆಗಳಲ್ಲಿ ಕೇವಲ 50 ಜನಕ್ಕೆ ಮಾತ್ರ ಭಾಗವಹಿಸಲು ಅವಕಾಶವಿದೆ. ಅದನ್ನು ಮೀರಿ 100-150 ಮಂದಿ ಸೇರಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದೇನೆ. ಈ ಬಗ್ಗೆ ನಮಗೂ ದೂರುಗಳು ಬಂದಿವೆ. ಅವುಗಳ ಬಗ್ಗೆ ಪ್ರಕರಣ ದಾಖಲಿಸಿ ಕ್ರಮಕ್ಕೆ ಸೂಚಿಸಿದ್ದೇನೆ ಎಂದರು.

ಈಗಲೂ ಕೆಲವು ಸಂಘ, ಸಂಸ್ಥೆಗಳು 50 ಜನರನ್ನು ಸೇರಿಸಿ ಸಭೆ ನಡೆಸುವ ವಿಷಯ ನಮ್ಮ ಗಮನಕ್ಕೆ ಬಂದಿದೆ.ಇದಕ್ಕೆ ಅವಕಾಶವೇ ಇಲ್ಲ. ಯಾವುದೇ ಸಭೆ, ಸಮಾರಂಭ ಮಾಡಲು ಕೇಂದ್ರ ಸರಕಾರ ನೀಡಿದ ಮಾರ್ಗಸೂಚಿಯಲ್ಲಿ ಅವಕಾಶವಿಲ್ಲ. ಯಕ್ಷಗಾನ, ರೋಟರಿ ಸೇರಿದಂತೆ ಯಾರಿಗೂ ಸಭೆ, ಸಮಾರಂಭ ಮಾಡಲು ಅವಕಾಶ ನೀಡುವುದಿಲ್ಲ ಎಂದು ಜಗದೀಶ್ ತಿಳಿಸಿದರು.

ದೇವಸ್ಥಾನಗಳ ಪ್ರವೇಶಕ್ಕೂ ನಿರ್ಬಂಧ ವಿಧಿಸುವಂತೆ ಕೆಲವು ಜಿಲ್ಲೆಗಳು ಇಂದು ಒತ್ತಾಯಿಸಿವೆ. ಸಾರ್ವಜನಿಕವಾಗಿ ಯಾವುದೇ ಹಬ್ಬ ಹರಿದಿನಗಳನ್ನು ಮಾಡುವುದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ಆದುದರಿಂದ ನೀವು ಮನೆಗಳಲ್ಲೇ ಹಬ್ಬವನ್ನು ಆಚರಿಸಿಕೊಳ್ಳಿ, ಆದರೆ ಸಾರ್ವಜನಿಕವಾಗಿ ಆಚರಿಸಲು ಅನುಮತಿ ಇಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News