ಅಂಚೆ ಇಲಾಖೆಯಲ್ಲೂ ‘ಸರ್ವರ್’ ಸಮಸ್ಯೆ

Update: 2020-07-13 13:01 GMT

ಮಂಗಳೂರು, ಜು.13: ಭಾರತೀಯ ಅಂಚೆ ಇಲಾಖೆಯು ದ.ಕ.ಜಿಲ್ಲೆಯ ಬಹುತೇಕ ಕಚೇರಿಗಳಲ್ಲಿ ‘ಸರ್ವರ್’ ಸಮಸ್ಯೆ ಉಂಟಾಗಿದೆ. ಇದರಿಂದ ಸಕಾಲದಲ್ಲಿ ಆಗಬೇಕಾಗಿದ್ದ ಕೆಲಸ ಕಾರ್ಯಗಳು ವಿಳಂಬವಾಗುತ್ತಿದ್ದು, ಸಿಬ್ಬಂದಿ ವರ್ಗಕ್ಕೆ ಮಾತ್ರವಲ್ಲ ಗ್ರಾಹಕರು ಕೂಡ ಕಾದು ಕಾದು ಸುಸ್ತಾಗುವಂತಾಗಿದೆ.

ಭಾರತೀಯ ಅಂಚೆ ಇಲಾಖೆಯು ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾಗಿ ತನ್ನ ಕಾರ್ಯಸ್ವರೂಪವನ್ನು ಬದಲಾಯಿಸಿಕೊಂಡು ಹೋಗುತ್ತಿದೆ. ಹಿಂದೆ ಕೇವಲ ಕಾಗದ ಬಟವಾಡೆ, ಮನಿ ಆರ್ಡರ್ ಸೇವೆ ನೀಡುತ್ತಿದ್ದ ಅಂಚೆ ಇಲಾಖೆಯು ಈಗ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಕೈಯಾಡಿಸುತ್ತಿದೆ. ಅದಕ್ಕಾಗಿ ಆಕರ್ಷಕ ಬಡ್ಡಿದರ ಘೋಷಿಸಿ ಬ್ಯಾಂಕ್ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಗ್ರಾಹಕರು ಕೂಡ ಅಂಚೆ ಇಲಾಖೆಯ ಸೇವೆಗೆ ಮಾರು ಹೋದರೂ ಕೂಡ ‘ಸರ್ವರ್’ ಸಮಸ್ಯೆಯು ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿವೆ. ಕಳೆದ ಮೂರು ವಾರದಿಂದ ಈ ಸಮಸ್ಯೆ ಬಿಗಡಾಯಿಸಿದ್ದು, ಗ್ರಾಹಕರು ಅಂಚೆ ಇಲಾಖೆಗೆ ತೆರಳಿ ಕಾದು ಕಾದು ಕೆಲಸ ಕಾರ್ಯಗಳಾಗದೆ ವಾಪಸ್ ಬರುತ್ತಿರುವುದು ಮಾಮೂಲಿಯಾಗಿದೆ.

ಭಾರತೀಯ ಅಂಚೆ ಇಲಾಖೆ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಇಂಟರ್ನೆಟ್ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದೆ. ಆದರೆ ಇದನ್ನು ನೇರವಾಗಿ ಸಂಸ್ಥೆಯ ಜತೆಯಲ್ಲಿ ಇಲಾಖೆ ಒಡಂಬಡಿಕೆ ಮಾಡಿಕೊಂಡಿಲ್ಲ. ಬದಲಾಗಿ ‘ಸೆಫಿ ಟೆಕ್ನಾಲಜಿ’ ಎಂಬ ಖಾಸಗಿ ಸಂಸ್ಥೆಯ ಮೂಲಕ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ಬಿಎಸ್ಎನ್ಎಲ್ ಸಂಸ್ಥೆಯು ಸೆಫಿ ಟೆಕ್ನಾಲಜಿಗೆ ವ್ಯವಸ್ಥೆ ಮಾಡಿಕೊಟ್ಟುದುದರ ಪರಿಣಾಮ ‘ಸೆಫಿ’ಯು ಅಂಚೆ ಇಲಾಖೆ ನೀಡುವ ಕೆಲಸ ಮಾಡುತ್ತಿದೆ. ಆದರೆ ಜಿಲ್ಲಾದ್ಯಂತ ಅಂಚೆ ಇಲಾಖೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಸರ್ವರ್ ಸಮಸ್ಯೆಯ ಕುರಿತು ಈಗಾಗಲೇ ಉನ್ನತ ಮಟ್ಟದಲ್ಲಿ ಅಧಿಕಾರಿಗಳ ಜತೆಯಲ್ಲಿ ಚರ್ಚೆಗಳು ನಡೆದರೂ ಕೂಡ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. *ಗ್ರಾಹಕರ ಜೊತೆ ಸಿಬ್ಬಂದಿ ವರ್ಗಕ್ಕೂ ಸುಸ್ತು

ಅಂಚೆ ಇಲಾಖೆಯ ಬಹುಮುಖ್ಯ ಕೆಲಸ ಕಾರ್ಯಗಳಿಗೆ ‘ನೆಟ್’ ಅತ್ಯಗತ್ಯ. ಆದರೆ ನಿರಂತರ ನೆಟ್ ಸಮಸ್ಯೆಯಿಂದ ಗ್ರಾಹಕರು ಮಾತ್ರವಲ್ಲ ಸಿಬ್ಬಂದಿ ವರ್ಗವೂ ಸುಸ್ತಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಕೆಲವು ಗ್ರಾಹಕರು ಸಾಕಷ್ಟು ದೂರದಿಂದ ರಿಕ್ಷಾ ಮತ್ತಿತರ ಬಾಡಿಗೆ ವಾಹನದಲ್ಲಿ ಅಂಚೆ ಇಲಾಖೆಗೆ ತೆರಳಿದರೂ ಕೂಡ ‘ಸರ್ವರ್’ ಸಮಸ್ಯೆಯಿಂದ ಕೆಲಸ ಆಗದೆ ಸಿಟ್ಟಿನಿಂದ ವಾಪಸ್ ಹೋಗುವುದು ಮತ್ತು ಸಿಬ್ಬಂದಿಯ ಜೊತೆ ಜಗಳವಾಡುವುದು ಸಾಮಾನ್ಯವಾಗಿದೆ. ಗ್ರಾಹಕರಿಗೆ ಸಕಾಲದಲ್ಲಿ ಸೇವೆ ನೀಡಲಾಗದೆ ಕೆಲವು ಸಿಬ್ಬಂದಿ ವರ್ಗವು ಪರಿತಪಿಸುವುದು ಕೂಡ ಮಾಮೂಲಿಯಾಗಿದೆ. ಅಂಚೆ ಇಲಾಖೆಯ ಸರ್ವರ್ ಸಮಸ್ಯೆ ಇಂದು ನಿನ್ನೆಯದಲ್ಲ. ಗ್ರಾಹಕರಿಗೆ ಹತ್ತಿರವಾಗುವ ಸಲುವಾಗಿ ಇಲಾಖೆಯು ಅನೇಕ ಹೊಸ ಯೋಜನೆ ಮತ್ತು ಸೇವೆಯನ್ನು ಪ್ರಕಟಿಸುತ್ತಿದ್ದರೂ ಕೂಡ ಸರ್ವರ್ ಸಮಸ್ಯೆಯಿಂದ ತಲೆಚಿಟ್ಟು ಹಿಡಿಯುತ್ತಿದೆ. ಸರ್ವರ್ ಸಮಸ್ಯೆಯಿಂದ ನಮ್ಮ ಉಳಿತಾಯ ಖಾತೆಯಲ್ಲಿ ಜಮೆಯಾದ ಹಣವನ್ನು ಪಡೆಯುವುದು ಕೂಡ ಸಾಧ್ಯವಾಗುತ್ತಿಲ್ಲ ಎಂದು ಗ್ರಾಹಕ ಮಂಗಳೂರಿನ ಹುಸೈನ್ ಎಂಬವರು ಅಭಿಪ್ರಾಯಪಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News