ಉಡುಪಿ: ಸೋಮವಾರ 53 ಮಂದಿಗೆ ಕೊರೋನ ಪಾಸಿಟಿವ್; ಸೋಂಕಿತರ ಸಂಖ್ಯೆ 1661ಕ್ಕೇರಿಕೆ

Update: 2020-07-13 15:28 GMT

ಉಡುಪಿ, ಜು.13: ಜಿಲ್ಲೆಯಲ್ಲಿ ಸೋಮವಾರ ಒಟ್ಟು 53 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ವೃದ್ಧರೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೇ ದಿನದಲ್ಲಿ 260 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಬೈಂದೂರು ತಾಲೂಕು ಉಪ್ಪುಂದದ 72 ವರ್ಷ ಪ್ರಾಯದ ವೃದ್ಧರೊಬ್ಬರು ಇಂದು ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ನೋವೆಲ್ ಕೊರೋನ (ಕೋವಿಡ್-19) ಮಹಾಮಾರಿ ನಾಲ್ಕನೇ ಬಲಿ ಪಡೆದಂತಾಯಿತು. ಅವರು ಕಳೆದ ಸುಮಾರು 15 ದಿನಗಳಿಂದ ಮಧುಮೇಹ, ಮೆದುಳಿನ ಪಾರ್ಶ್ವವಾಯು ಸೇರಿದಂತೆ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳೊಂದಿಗೆ ಕೋವಿಡ್-19 ವಿರುದ್ಧವೂ ಸೆಣಸಾಡುತಿದ್ದರು.

ಸೋಂಕಿಗೆ ಪಾಸಿಟಿವ್ ಕಂಡುಬಂದ ವೇಳೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ನೇರವಾಗಿ ಉಡುಪಿಗೆ ಕರೆತಂದು ಐಸಿಯುನ ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ಕೆಲವು ದಿನಗಳ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದ ಅವರನ್ನು ವಾರ್ಡ್‌ಗೆ ವರ್ಗಾಯಿಸಲಾಗಿತ್ತು. ಮತ್ತೊಮ್ಮೆ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದಾಗ ಅವರನ್ನು ತೀವ್ರ ನಿಗಾ ವಿಭಾಗದ ವೆಂಟಿಲೇಟರ್‌ಗೆ ವರ್ಗಾಯಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಿಂದ ಬಂದು ಇಲ್ಲಿ ಪಾಸಿಟಿವ್ ಕಂಡುಬಂದ ವ್ಯಕ್ತಿಯ ಸಂಪರ್ಕದಿಂದ ಅವರಿಗೆ ಸೋಂಕು ತಗಲಿತ್ತು ಎಂದು ತಿಳಿದುಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್-19 ನಾಲ್ಕನೇ ಬಲಿ ಪಡೆದಂತಾಯಿತು. ಈ ಹಿಂದೆ ಮೃತಪಟ್ಟವರೂ ಕುಂದಾಪುರ, ಬೈಂದೂರು ಪ್ರದೇಶಕ್ಕೆ ಸೇರಿದವ ರಾಗಿದ್ದರೂ, ಎಲ್ಲರೂ ಮುಂಬಯಿಯಿಂದ ಬಂದವರಾಗಿದ್ದರು. ಆದರೆ ಇವರು ಜಿಲ್ಲೆಯಲ್ಲಿ ಮೃತಪಟ್ಟ ಪ್ರಥಮ ಸ್ಥಳೀಯರಾಗಿದ್ದಾರೆ.

ಇಂದು ಮುಂಜಾನೆ ನಸುಕಿನಲ್ಲಿ ಮೃತಪಟ್ಟ ಇವರ ಅಂತ್ಯಸಂಸ್ಕಾರ ಉಡುಪಿಯ ಬೀಡಿನಗುಡ್ಡೆಯಲ್ಲಿ ಕೋವಿಡ್ ಮಾರ್ಗಸೂಚಿಯ ಪ್ರಕಾರ ನಡೆಯಿತು ಎಂದು ಮೂಲ ತಿಳಿಸಿದೆ.

53 ಮಂದಿ ಪಾಸಿಟಿವ್: ಜಿಲ್ಲೆಯಲ್ಲಿ ಸೋಮವಾರ ಒಟ್ಟು 53 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಅಲ್ಲದೇ ದಿನದಲ್ಲಿ 260 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದ 53 ಮಂದಿಯಲ್ಲಿ 12 ಮಂದಿ ಶೀತಜ್ವರದಿಂದ ಬಳಲುತಿದ್ದವರಾದರೆ ಉಳಿದ 41 ಮಂದಿ ಈಗಾಗಲೇ ಜಿಲ್ಲೆಯಲ್ಲಿ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

ಸೋಂಕಿತರಲ್ಲಿ ಉಡುಪಿ ತಾಲೂಕಿನ 27 ಮಂದಿ, ಕುಂದಾಪುರ ತಾಲೂಕಿನ 23 ಮಂದಿ ಹಾಗೂ ಕಾರ್ಕಳ ತಾಲೂಕಿನ ಮೂವರು ಸೇರಿದ್ದಾರೆ. 31 ಮಂದಿ ಪುರುಷರು, 18 ಮಂದಿ ಮಹಿಳೆಯರು ಹಾಗೂ 10 ವರ್ಷದೊಳಗಿನ ಪ್ರಾಯದ ನಾಲ್ವರು -ಎರಡು ಗಂಡು, ಎರಡು ಹೆಣ್ಣು- ಮಕ್ಕಳು ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು. ರವಿವಾರ ಬಂದ 53 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 1661ಕ್ಕೇರಿದೆ.

65 ಮಂದಿ ಗುಣಮುಖ:  ಜಿಲ್ಲೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾದ 65 ಮಂದಿ ಇಂದು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದಾರೆ. ಇವರಲ್ಲಿ 12 ಮಂದಿ ಡಾ.ಟಿಎಂಎ ಪೈ ಆಸ್ಪತ್ರೆಯಿಂದ, 50 ಮಂದಿ ಕುಂದಾಪುರದ ಸರಕಾರಿ ಆಸ್ಪತ್ರೆಯಿಂದ ಹಾಗೂ ಉಳಿದ ಮೂವರು ಕಾರ್ಕಳ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 1338ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 378 ಮಂದಿ ಜಿಲ್ಲೆಯಲ್ಲಿ ಇನ್ನೂ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ.

206 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಸೋಮವಾರ ಇನ್ನೂ 206 ಮಂದಿಯ ಗಂಟಲು ದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಶಂಕಿತರು ಇಬ್ಬರು, ಕೋವಿಡ್ ಸಂಪರ್ಕಿತರು 28 ಮಂದಿ ಇದ್ದರೆ, ಉಸಿರಾಟದ ತೊಂದರೆಯ 15 ಮಂದಿ, ಶೀತಜ್ವರದಿಂದ ಬಳಲುವ 47 ಮಂದಿ ಹಾಗೂ ದೇಶ-ವಿದೇಶಗಳ ವಿವಿಧ ಕೋವಿಡ್ ಹಾಟ್‌ಸ್ಪಾಟ್ ಗಳಿಂದ ಬಂದ 114 ಮಂದಿಯ ಸ್ಯಾಂಪಲ್‌ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.

ಇಂದು ಪಡೆದ ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 22,533ಕ್ಕೇರಿದೆ. ಇವುಗಳಲ್ಲಿ ಈವರೆಗೆ 19,123 ನೆಗೆಟಿವ್, 1661 ಪಾಸಿಟಿವ್ ಬಂದಿವೆ. ಈವರೆಗೆ ನಾಲ್ವರು ಮೃತಪಟ್ಟಿದ್ದಾರೆ. ಇನ್ನು ಒಟ್ಟು 1749 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ. ಇಂದು 34 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ನಾಲ್ವರು ಕೋವಿಡ್ ಶಂಕಿತರು, 10 ಮಂದಿ ಉಸಿರಾಟ ತೊಂದರೆಯವರು ಹಾಗೂ 20 ಮಂದಿ ಶೀತಜ್ವರದಿಂದ ಬಳಲುವವರು ಸೇರಿದ್ದಾರೆ ಎಂದರು.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗಳಿಂದ ಇಂದು 26 ಮಂದಿ ಬಿಡುಗಡೆಗೊಂಡಿದ್ದು, 148 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಡೆಯು ತಿದ್ದಾರೆ. ಇಂದು ಕೊರೋನ ಸೋಂಕಿನ ಗುಣಲಕ್ಷಣದ 97 ಮಂದಿ ಸೇರಿದಂತೆ ಒಟ್ಟು 6276 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿ ಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 1401 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸೂಡ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News