ದ.ಕ.ಜಿಲ್ಲೆಯಲ್ಲಿ ಮತ್ತೆ ಲಾಕ್‌ಡೌನ್: ಅಗತ್ಯ ವಸ್ತುಗಳ ಖರೀದಿಗೆ ತರಾತುರಿ

Update: 2020-07-13 14:47 GMT

ಮಂಗಳೂರು, ಜು.13: ದ.ಕ.ಜಿಲ್ಲೆಯಲ್ಲಿ ಕೊರೋನ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗುರುವಾರದಿಂದ ಮತ್ತೆ ಲಾಕ್‌ಡೌನ್ ಘೋಷಿಸಲಾಗಿರುವುದರಿಂದ ಅಗತ್ಯ ವಸ್ತುಗಳ ಖರೀದಿಗೆ ಇಂದು ಮಾರುಕಟ್ಟೆಗಳಲ್ಲಿ ಸಾರ್ವಜನಿಕರ ತರಾತುರಿ ಕಂಡು ಬಂತು.

ಕಳೆದ ಕೆಲವು ದಿನಗಳಿಂದ ದ.ಕ.ಜಿಲ್ಲೆಯಲ್ಲೂ ಲಾಕ್‌ಡೌನ್ ಆಗಲಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಕಳೆದ ಶನಿವಾರ ಬೆಂಗಳೂರಿನಲ್ಲಿ ಮಂಗಳವಾರದಿಂದ ಲಾಕ್‌ಡೌನ್ ಘೋಷಿಸಿದಾಗಿನಿಂದಲೇ ದ.ಕ. ಜಿಲ್ಲೆಯಲ್ಲೂ ಲಾಕ್‌ಡೌನ್ ಆಗಲಿದೆ ಎಂಬ ಸುದ್ದಿ ಜನಸಾಮಾನ್ಯರಲ್ಲಿ ಹರಿದಾಡಿತ್ತು. ಅದರಿಂದಾಗಿಯೇ ನಿನ್ನೆ ಸಂಡೇ ಲಾಕ್‌ಡೌನ್‌ನಲ್ಲಿ ಜಿಲ್ಲೆಯಲ್ಲಿ ಸ್ತಬ್ಧವಾಗಿದ್ದ ಮಾರುಕಟ್ಟೆಗಳು ಇಂದು ಬೆಳಗ್ಗಿನಿಂದಲೇ ಚುರುಕುಪಡೆದಿತ್ತು. ಸುಮಾರು ಎರಡೂವರೆ ತಿಂಗಳ ಲಾಕ್‌ಡೌನ್ ಬಳಿಕ ಅನ್‌ಲಾಕ್‌ಗೊಂಡ ಬಳಿಕ ಮಾರುಕಟ್ಟೆ, ಮಾಲ್‌ಗಳಲ್ಲಿ ವ್ಯಾಪಾರ ವಹಿವಾಟು ಬಹುತೇಕ ಕುಂಠಿತವಾಗಿತ್ತು. ಆದರೆ ಇಂದು ಬೆಳಗ್ಗೆ ಸೂಪರ್ ಮಾರ್ಕೆಟ್ ಅಂಗಡಿಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸುವುದು ಕಂಡು ಬಂದಿದೆ.

ತರಕಾರಿ ಹಣ್ಣು ಹಂಪಲು ಸೇರಿದಂತೆ ದಿನಸಿ ಸಾಮಗ್ರಿಗಳ ಖರೀದಿ ಇಂದು ಹೆಚ್ಚಾಗಿ ನಡೆದಿದ್ದು, ಜನಸಾಮಾನ್ಯರಲ್ಲಿ ಕೊರೋನ ಭೀತಿಯ ಜತೆಗೆ ಲಾಕ್‌ಡೌನ್ ಆತಂಕವೂ ಕಾಡಲಾರಂಭಿಸಿದೆ.

ಈಗಾಗಲೇ ಈ ಹಿಂದಿನ ಲಾಕ್‌ಡೌನ್‌ನಿಂದ ತೀರಾ ಕಂಗೆಟ್ಟು, ವ್ಯಾಪಾರ, ವಹಿವಾಟು, ಉದ್ಯೋಗವಿಲ್ಲದೆ ಕಂಗಾಲಾಗಿದ್ದ ಜನರು ಮತ್ತೆ ಲಾಕ್‌ಡೌನ್ ಬಗ್ಗೆ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. ಈಗಾಗಲೇ ಉದ್ಯೋಗ ಕಡಿತ, ವೇತನ ಕಡಿತದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ಜನತೆ ಇದೀಗ ಮತ್ತೆ ಲಾಕ್‌ಡೌನ್ ಘೋಷಣೆಯಿಂದಾಗಿ ತಮ್ಮ ಮುಂದಿನ ಜೀವನದ ಕುರಿತಂತೆ ಆತಂಕಿತರಾಗಿದ್ದಾರೆ. ಮಂಗಳವಾರ ಮತ್ತು ಬುಧವಾರ ಮಾರುಕಟ್ಟೆ, ಅಂಗಡಿಗಳಲ್ಲಿ ಜನಜಂಗುಳಿ ಹೆಚ್ಚಾಗಬಹುದೆಂಬ ಆತಂಕದಿಂದ ಇಂದು ಸಂಜೆಯ ವೇಳೆಗೆ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು,ಕೆಲವು ಕಡೆ ಸುರಕ್ಷಿತ ಅಂತರವನ್ನೇ ಮರೆತಂತಿತ್ತು. ಕೆಲವೊಂದು ಪಡಿತರ ಅಂಗಡಿಗಳಲ್ಲಿಯೂ ಇಂದು ಖರೀದಿಗೆ ಜನರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News