ದ.ಕ. ಜಿಲ್ಲೆಯಲ್ಲಿ ಮತ್ತೆ 131 ಮಂದಿಗೆ ಕೊರೋನ ಪಾಸಿಟಿವ್; ಸೋಂಕಿಗೆ ನಾಲ್ವರು ಬಲಿ

Update: 2020-07-13 15:13 GMT

ಮಂಗಳೂರು, ಜು.13: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮತ್ತೆ 131 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ನಾಲ್ವರು ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದಾಗಿ ಸಾವಿನ ಸಂಖ್ಯೆ 50ಕ್ಕೆ ಏರಿಕೆಯಾಗದೆ.

ಮೂಲ ಗೊತ್ತಿಲ್ಲದ ಸೋಂಕು ಏರಿಕೆ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲೆ ನಿರ್ಮಿಸುತ್ತಿವೆ. ಆತಂಕದ ಸಂಗತಿಯೆಂದರೆ, ಇವರಲ್ಲಿ ಸೋಂಕು ಮೂಲವೇ ಪತ್ತೆಯಾಗದ ಬರೋಬ್ಬರಿ 38 ಪ್ರಕರಣಗಳು ಸೋಮವಾರ ದಾಖಲಾಗಿವೆ. 

ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಏಕಾಏಕಿ ಸೋಂಕು ಹರಡುವ ಸ್ವರೂಪವೇ ಬದಲಾಗಿಬಿಟ್ಟಿದೆ. ಸೋಮವಾರ ಹೊಸದಾಗಿ ಸೋಂಕು ಪತ್ತೆಯಾದ 131 ಮಂದಿಯಲ್ಲಿ ಕೇವಲ 16 ಮಂದಿಗೆ ಮಾತ್ರ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಬಂದಿದ್ದರೆ, ಇನ್ಫ್ಲೂಯೆನ್ಜಾ ಲೈಕ್ ಇಲ್ನೆಸ್ (ಶೀತ) 63 ಪ್ರಕರಣಗಳು ಪತ್ತೆಯಾಗಿವೆ. ಎಸ್ಎಆರ್ಐ (ತೀವ್ರ ಉಸಿರಾಟ ಸಮಸ್ಯೆ) 10 ಪ್ರಕರಣಗಳು ಇವೆ. ವಿದೇಶದಿಂದ ಬಂದ ನಾಲ್ವರಿಗೆ ಪಾಸಿಟಿವ್ ದೃಢಪಟ್ಟಿದೆ.

ದ.ಕ. ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 62 ಮಂದಿ ಸೋಮವಾರ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇವರಲ್ಲಿ ಹೆಚ್ಚಿನವರು ಯುವಕರೇ ಆಗಿದ್ದರೆ, ಹಿರಿಯ ನಾಗರಿಕರೂ ಸೇರಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಮತ್ತೆ ನಾಲ್ವರು ಬಲಿ: ಅರ್ಧ ಶತಕ ತಲುಪಿದ ಕೋವಿಡ್ ಸಾವು

ಮಂಗಳೂರು, ಜು.13: ದ.ಕ. ಜಿಲ್ಲೆಯಲ್ಲಿ ಕೋವಿಡ್19 ಗೆ ಸೋಮವಾರ ಮತ್ತೆ ನಾಲ್ವರು ಬಲಿಯಾಗಿದ್ದು, ಇದರಿಂದ ಸೋಂಕಿಗೆ ಬಲಿಯಾದವರ  ಒಟ್ಟು ಸಂಖ್ಯೆ 50ಕ್ಕೇರಿದೆ.

ಜಿಲ್ಲೆಯಲ್ಲಿ ಸೋಮವಾರ ಮೃತಪಟ್ಟವರ ಪೈಕಿ ಇಬ್ಬರು ಐಸಿಯುನಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇನ್ನುಳಿದ ಇಬ್ಬರು ತೀವ್ರ ಉಸಿರಾಟದ ತೊಂದರೆ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು.

ಮಧುಮೇಹ, ಹೃದಯ ಸಂಬಂಧಿ ಕಾಯಿಲೆ, ನ್ಯುಮೋನಿಯದಿಂದ ಬಳಲುತ್ತಿದ್ದ 70 ವರ್ಷದ ವೃದ್ಧ, ಯಕೃತ್ತಿನ ಉರಿಯೂತದಿಂದ ಬಳಲುತ್ತಿದ್ದ 53 ವರ್ಷದ ವ್ಯಕ್ತಿ, ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 60 ವರ್ಷದ ವೃದ್ಧ, ಶ್ವಾಸಕೋಶ ಕಾಯಿಲೆಯಿಂದ ಬಳಲುತ್ತಿದ್ದ 70 ವರ್ಷದ ವೃದ್ಧ ಕೊವೀಡ್ ಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಸೋಮವಾರ ವರದಿಯಾದ ಮರಣ ಪ್ರಕರಣಗಳ ಸಾವಿನ ಕಾರಣವನ್ನು ನಿರ್ಧರಿಸಲು ಜಿಲ್ಲಾ ಮಟ್ಟದ ತಜ್ಞರ ಸಮಿತಿಯಿಂದ ‘ಡೆತ್ ಆಡಿಟ್’ ವರದಿ ನಿರೀಕ್ಷಣೆಯಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News