ಅಹ್ಮದಾಬಾದ್: ಮಾಸ್ಕ್ ಹಾಕದವರಿಗೆ ವಿಧಿಸುವ ದಂಡ 500 ರೂ.ಗೆ ಏರಿಕೆ

Update: 2020-07-13 15:16 GMT

ಅಹ್ಮದಾಬಾದ್, ಜು.13: ಅಹ್ಮದಾಬಾದ್ ನಲ್ಲಿ ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಕಠಿಣ ಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಹಾಕದವರಿಗೆ ವಿಧಿಸುವ ದಂಡವನ್ನು 200 ರೂಪಾಯಿಯಿಂದ 500 ರೂಪಾಯಿಗೆ ನಗರಾಡಳಿತ ಸೋಮವಾರ ಏರಿಕೆ ಮಾಡಿದೆ.

ಪಾನ್ ಅಂಗಡಿಯ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರು ಉಗುಳುವುದು ಪತ್ತೆಯಾದರೆ, ಪಾನ್ ಅಂಗಡಿಯ ಮಾಲಕರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಗುಜರಾತ್ ನ ಅಹ್ಮದಾಬಾದ್ ನಗರದ ಕೊರೋನ ಪಿಡುಗಿಗೆ ಸಂಬಂಧಿಸಿದ ಕಾರ್ಯಗಳ ಉಸ್ತುವಾರಿಗೆ ನಿಯೋಜಿತರಾದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಗುಪ್ತಾ ತಿಳಿಸಿದ್ದಾರೆ.

ಸೋಮವಾರ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಗುಪ್ತಾ, ಮಾಸ್ಕ್ ಹಾಕದವರಿಗೆ ದಂಡ ವಿಧಿಸುವುದನ್ನು ಏರಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಹಲವು ಜನರು ಸಾರ್ವಜನಿಕ ಸ್ಥಳದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ನಿಯಮವನ್ನು ಗಾಳಿಗೆ ತೂರುತ್ತಿದ್ದಾರೆ. ಇದನ್ನು ಗಮನಿಸಿ ಅಹ್ಮದಾಬಾದ್ ನಗರಾಡಳಿತದ ಆಯುಕ್ತ ಮುಖೇಶ್ ಕುಮಾರ್ ಹಾಗೂ ಇತರ ಹಿರಿಯ ಅಧಿಕಾರಗಳೊಂದಿಗೆ ಸೋಮವಾರ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಕಡ್ಡಾಯವಾಗಿ ಮಾಸ್ಕ್ ಹಾಕುವುದನ್ನು ಜನರು ಈಗಲೂ ಅನುಸರಿಸುತ್ತಿಲ್ಲ. ಹಲವರು ಈಗಲೂ ಮಾಸ್ಕ್ ಹಾಕದೇ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಆದುದರಿಂದ ಮಾಸ್ಕ್ ಹಾಕದೆ ಇರುವವರಿಗೆ ವಿಧಿಸುವ ದಂಡವನ್ನು 200 ರೂಪಾಯಿಂದ 500 ರೂಪಾಯಿ ಏರಿಕೆ ಮಾಡಲು ನಿರ್ಧರಿಸಲಾಯಿತು ಎಂದು ಗುಪ್ತಾ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News