ತಬ್ಲೀಗಿ ಜಮಾಅತ್: 14 ರಾಷ್ಟ್ರಗಳ ಪ್ರಜೆಗಳು ಆರೋಪ ಮುಕ್ತ

Update: 2020-07-13 15:21 GMT

ಹೊಸದಿಲ್ಲಿ, ಜು. 13: ಕೋವಿಡ್-19 ಲಾಕ್ ಡೌನ್ ಸಂದರ್ಭ ಇಲ್ಲಿ ನಡೆದ ತಬ್ಲೀಗಿ ಜಮಾಅತ್ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ವಿಸಾ ನಿಯಮ ಸಹಿತ ಹಲವು ನಿಯಮಗಳನ್ನು ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣಗಳ ಮನವಿ ಚೌಕಾಶಿ ಪ್ರಕ್ರಿಯೆ (ವಿಚಾರಣೆಯನ್ನು ತಪ್ಪಿಸಲು ಇರುವ ಕಾನೂನು ಪ್ರಕ್ರಿಯೆ) ಅಡಿಯಲ್ಲಿ ಲಘು ಆರೋಪಗಳನ್ನು ಒಪ್ಪಿಕೊಂಡ 14 ರಾಷ್ಟ್ರಗಳ ಪ್ರಜೆಗಳಿಗೆ ವಿವಿಧ ಮೊತ್ತದ ದಂಡ ಪಾವತಿಸಿ ಬಿಡುಗಡೆಗೊಳ್ಳಲು ದಿಲ್ಲಿ ನ್ಯಾಯಾಲಯ ಸೋಮವಾರ ಅವಕಾಶ ನೀಡಿದೆ.

ದರೆ, ಐದು ರಾಷ್ಟ್ರಗಳ ಪ್ರಜೆಗಳು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುವುದಾಗಿ ತಿಳಿಸಿದ್ದಾರೆ.

 ಅಲ್ಜೀರಿಯಾ, ಬೆಲ್ಜಿಯಂ, ಇಂಗ್ಲೆಂಡ್, ಈಜಿಪ್ಟ್ ಹಾಗೂ ಪಿಲಿಪ್ಪೈನ್ ರಾಷ್ಟ್ರದ ಪ್ರಜೆಗಳು ತಲಾ 10 ಸಾವಿರ ರೂಪಾಯಿ ದಂಡ ಪಾವತಿಸಿ ಬಿಡುಗಡೆಗೊಳ್ಳಲು ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಹಿಮಾಂಶು ಅವಕಾಶ ನೀಡಿದ್ದಾರೆ.

ತಲಾ 5000 ರೂಪಾಯಿ ದಂಡ ಪಾವತಿಸಿ ಬಿಡುಗಡೆಗೊಳ್ಳಲು ಐವರು ಸುಡಾನ್ ಪ್ರಜೆಗಳಿಗೆ ಇನ್ನೊರ್ವ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಆಶಿಸ್ ಗುಪ್ತಾ ಅವಕಾಶ ನೀಡಿದ್ದಾರೆ.

ತಲಾ 5000 ರೂಪಾಯಿ ದಂಡ ಪಾವತಿಸಿ ಬಿಡುಗಡೆಗೊಳ್ಳುವಂತೆ ಚೀನಾ, ಮೊರಾಕ್ಕೊ, ಉಕ್ರೈನ್, ಇಥಿಯೋಪಿಯಾ, ಫಿಜಿ, ಆಸ್ಟ್ರೇಲಿಯಾ, ಬ್ರೆಝಿಲ್, ಅಫಘಾನಿಸ್ಥಾನದ ಪ್ರಜೆಗಳಿಗೆ ಮೆಟ್ರೋಪಾಲಿಟಿನ್ ಮ್ಯಾಜಿಸ್ಟ್ರೇಟ್ ಪರಾಸ್ ದಲಾಲ್ ಅವಕಾಶ ನೀಡಿದ್ದಾರೆ.

 ಪ್ರಕರಣದಲ್ಲಿ ದೂರು ನೀಡಿದ ಲಜಪತ್ ನಗರದ ಉಪ-ವಿಭಾಗೀಯ ದಂಡಾಧಿಕಾರಿ , ಲಜಪತ್ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ, ನಿಝಾಮುದ್ದೀನ್  ಇನ್ ಸ್ಪೆಕ್ಟರ್ ಆರೋಪಿಗಳ ಮನವಿಗೆ ತಮ್ಮ ಆಕ್ಷೇಪ ಏನೂ ಇಲ್ಲ ಎಂದು ಹೇಳಿದ ಬಳಿಕ ದಂಡ ಪಾವತಿಸಿ ಬಿಡುಗಡೆಗೊಳ್ಳಲು ನ್ಯಾಯಾಲಯ ಅವರಿಗೆ ಅವಕಾಶ ನೀಡಿದೆ.

ಆದರೆ, ಸುಡಾನ್ ನ ಇಬ್ಬರು ಪ್ರಜೆಗಳು, ಜೋರ್ಡಾನ್, ಅಮೆರಿಕ, ರಶ್ಯಾ, ಕಝಕಿಸ್ತಾನದ ಪ್ರಜೆಗಳು ಹಾಗೂ ಇಂಗ್ಲೆಂಡ್ ನಲ್ಲಿರುವ ಅನಿವಾಸಿ ಭಾರತೀಯರು ಲಘು ಆರೋಪಗಳಿಗೆ ಸಂಬಂಧಿಸಿ ತಪ್ಪೊಪ್ಪಿಗೆ ಮನವಿ ಸಲ್ಲಿಸಿಲ್ಲ ಎಂದು ಆರೋಪಿಗಳನ್ನು ಪ್ರತಿನಿಧಿಸುತ್ತಿರುವ ವಕೀಲರಾದ ಅಶಿಮಾ ಮಂಡ್ಲಾ, ಮಂದಾಕಿನಿ ಸಿಂಗ್, ಫಾಹಿಮ್ ಖಾನ್ ಹಾಗೂ ಅಹ್ಮದ್ ಖಾನ್ ತಿಳಿಸಿದ್ದಾರೆ.

ಮನವಿ ಚೌಕಾಶಿ ಅಡಿಯಲ್ಲಿ ತಮ್ಮ ತಪ್ಪಿಗೆ ಕನಿಷ್ಠ ಶಿಕ್ಷೆ ನೀಡುವಂತೆ ಆರೋಪಿಗಳು ತಪ್ಪೊಪ್ಪಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News